ಉಡುಪಿ: ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಇರಿಸಿದ್ದ ಭೀಕರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಕುಂದಾಪುರ ಮೂಲದ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದ್ದು, DNA ಪರೀಕ್ಷೆಯಿಂದ ದೃಢಪಟ್ಟಿದೆ.
ಕಳೆದ ಜುಲೈ ತಿಂಗಳಲ್ಲಿ ಈ ಹತ್ಯೆ ನಡೆದಿದ್ದು, ಎರಡು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕಾಶ್ ಅವರು ಶಾರ್ಜಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಟೀನಾ (ಮೂಲತಃ ಉದ್ಯಾವರ) ಹಾಗೂ SSLC ಓದುತ್ತಿರುವ ಪುತ್ರನೊಂದಿಗೆ ಶಾರ್ಜಾದಲ್ಲಿ ವಾಸವಾಗಿದ್ದರು. ದಂಪತಿ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಅನುಮಾನ ಹೇಗೆ ಬಂತು?..
ಜುಲೈ 20 ರಂದು ಸಹೋದರ ಪ್ರಶಾಂತ್ ಕುಂದರ್ ಅವರು ಪ್ರಕಾಶ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಪ್ರಕಾಶ್ ವಾಯ್ಸ್ ಮೆಸೇಜ್ ಮೂಲಕ ಉತ್ತರಿಸುತ್ತಿದ್ದರು, ಆದರೆ ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರಿಸಿದ್ದಾರೆ. ಕರೆ ಮಾಡುವಂತೆ ಒತ್ತಾಯಿಸಿದಾಗ ಸಂಪರ್ಕ ಕಡಿತಗೊಂಡಿದೆ.
ಆತಂಕಗೊಂಡ ಕುಟುಂಬಸ್ಥರು ಅವರು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಭಾರತಕ್ಕೆ ಬಾರದ ಕಾರಣ ಶಾರ್ಜಾ ಪೊಲೀಸರಿಗೆ ದೂರು ನೀಡಲಾಗಿದೆ.
ಪೊಲೀಸರು ತನಿಖೆ ನಡೆಸಿದಾಗ ಪ್ರಕಾಶ್ ಅವರದ್ದೇ ಕಾರಿನ ಡಿಕ್ಕಿಯಲ್ಲಿ ಚಾಕುವಿನಿಂದ ಇರಿದು 9 ತುಂಡುಗಳಾಗಿ ಮಾಡಿದ್ದ ಶವ ಪತ್ತೆಯಾಗಿದೆ. CCTV ದೃಶ್ಯದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಚೀಲವೊಂದನ್ನು ಸಾಗಿಸುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ.
ಹತ್ಯೆಯ ನಂತರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿದ್ದು, ಇದೀಗ ಅವರು ಭಾರತಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಯಲ್ಲಿ ಪತ್ನಿಯ ಪಾತ್ರವಿದೆಯೇ ಎಂಬ ಕೋನದಲ್ಲೂ ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟೀನಾಗೆ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಆರೋಪವೂ ಕೇಳಿಬಂದಿದ್ದು, ಇದು ತನಿಖೆಯಿಂದ ದೃಢಪಡಬೇಕಿದೆ.
ಸದ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.




