ಸುಳ್ಯ: ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಟೆಂಪೋ ಟ್ರಾವೆಲರ್ ಮೇಲೆ ಉರುಳಿ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ನಡೆದಿದೆ.
ಗುಜರಾತ್‌ನ ಅಹಮದಾಬಾದ್‌ನ ಪ್ರವಾಸಿಗರ ಗುಂಪೊಂದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ದೇವರಕೊಲ್ಲಿ ಅಬ್ಬಿ ಜಲಪಾತದ ಬಳಿ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ತಮ್ಮ ಟಿಟಿ ವಾಹನವನ್ನು ನಿಲ್ಲಿಸಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಸುಳ್ಯದ ಕಡೆಗೆ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ನೇರವಾಗಿ ನಿಂತಿದ್ದ ಪ್ರಯಾಣಿಕ ವಾಹನದ ಮೇಲೆ ಉರುಳಿಬಿದ್ದಿದೆ ಎಂದು ತಿಳಿದು ಬಂದಿದೆ.
ಟಿಟಿಯೊಳಗಿದ್ದ ಏಳು ಪ್ರವಾಸಿಗರಲ್ಲಿ ಒಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಕೂಡ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ತಕ್ಷಣ ಆ್ಯಂಬುಲೆನ್ಸ್‌ಗಳ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಬಳಿಕ ಕ್ರೇನ್ ಮೂಲಕ ಉರುಳಿಬಿದ್ದ ಲಾರಿಯನ್ನು ಮೇಲಕ್ಕೆತ್ತಿ ಹೆದ್ದಾರಿಯನ್ನು ತೆರವುಗೊಳಿಸಲಾಯಿತು.




