Home Crime ಶಿರ್ವಾ: ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ, ಕೊಲೆ ಬೆದರಿಕೆ ಆರೋಪ…!!

ಶಿರ್ವಾ: ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ, ಕೊಲೆ ಬೆದರಿಕೆ ಆರೋಪ…!!

ಶಿರ್ವಾ: ಹೆಚ್ಚಿನ ವರದಕ್ಷಿಣೆಗಾಗಿ ಪತಿ ಹಾಗೂ ಆತನ ಕುಟುಂಬಸ್ಥರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಶಿರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಸಂಧ್ಯಾ (32) ಅವರು 2020ರ ನವೆಂಬರ್ 18ರಂದು ಗಂಗೊಳ್ಳಿ ನಿವಾಸಿ ನಾಗೇಂದ್ರ ಪೂಜಾರಿ ಅವರನ್ನು ವಿವಾಹವಾಗಿದ್ದರು. ವಿವಾಹದ ವೇಳೆ ಪತಿ ಹಾಗೂ ಮನೆಯವರ ಒತ್ತಾಯದ ಮೇರೆಗೆ ಸಂಧ್ಯಾ ಅವರ ತಂದೆ ₹2 ಲಕ್ಷ ವರದಕ್ಷಿಣೆ ನೀಡಿದ್ದರು ಎನ್ನಲಾಗಿದೆ.

ವಿವಾಹದ ಬಳಿಕ ಪತಿ ನಾಗೇಂದ್ರ ಪೂಜಾರಿ, ಆತನ ತಂದೆ ಬಾಬು ಪೂಜಾರಿ, ತಾಯಿ ಗುಲಾಬಿ ಪೂಜಾರ್ತಿ, ಸಹೋದರಿ ಸುಲೇಖಾ ಹಾಗೂ ಆಕೆಯ ಪತಿ ಸದೀಪ ಪೂಜಾರಿ ಹೆಚ್ಚಿನ ವರದಕ್ಷಿಣೆಗಾಗಿ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್ 10ರಂದು ರಾತ್ರಿ 8.30ರ ಸುಮಾರಿಗೆ ಸಂಧ್ಯಾ ಅವರ ತವರು ಮನೆಯಾದ ಕಟ್ಟಿಂಗೇರಿ ಗ್ರಾಮದ ಕಡಿಂಬಿಲಕ್ಕೆ ನಾದಿನಿ ಸುಲೇಖಾ ಹಾಗೂ ಬಾವ ಸದೀಪ ಪೂಜಾರಿ ಬಂದು, ವಿವಾಹ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾರೆ. ವಿಚ್ಛೇದನ ನೀಡದಿದ್ದರೆ ಸಂಧ್ಯಾ ಹಾಗೂ ಅವರ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.