ಕಾರ್ಕಳ: ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬರು ಕ್ಷುಲ್ಲಕ ವಿಚಾರಕ್ಕೆ ಪಕ್ಕದ ಮನೆಯ ನಿವಾಸಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಬಳಿಕ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ನಡೆದಿದೆ.
ಆಗಸ್ಟ್ 11ರಂದು ಸುಂದರ ಆಚಾರಿ (64) ಅವರು ಕೆಲಸಕ್ಕೆ ತೆರಳದೆ ಮನೆಯಲ್ಲಿದ್ದ ವೇಳೆ, ಪಕ್ಕದ ಮನೆಯ ನಿವಾಸಿ ಪುರುಷೋತ್ತಮ ಆಚಾರಿ ಎಂಬಾತ ಮದ್ಯಪಾನ ಮಾಡಿ ಬೆಳಗ್ಗಿನಿಂದಲೇ ಸುಂದರ ಆಚಾರಿ ಅವರನ್ನು ಉದ್ದೇಶಿಸಿ ಬೈಯುತ್ತಿದ್ದ ಎನ್ನಲಾಗಿದೆ.
ಮಧ್ಯಾಹ್ನ ಸುಮಾರು 3:15ರ ವೇಳೆಗೆ ಸುಂದರ ಆಚಾರಿ ಅವರ ಮನೆಯ ಅಂಗಳಕ್ಕೆ ಬಂದು ಬೈಯುತ್ತಿದ್ದಾಗ, ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಆರೋಪಿತನು ಕೈಯಲ್ಲಿದ್ದ ಕತ್ತಿಯನ್ನು ಸುಂದರ ಆಚಾರಿ ಅವರತ್ತ ಬೀಸಿದ್ದು, ಕತ್ತಿ ಹಣೆಗೆ ತಾಗಿ ರಕ್ತಗಾಯವಾಗಿದೆ.
ತಕ್ಷಣ ಸ್ಥಳದಲ್ಲಿದ್ದ ಸುಂದರ ಆಚಾರಿ ಅವರ ಪತ್ನಿ ವೇದಾವತಿ ಹಾಗೂ ಅವರು ಸೇರಿ ಆರೋಪಿತನ ಕೈಯಲ್ಲಿದ್ದ ಕತ್ತಿಯನ್ನು ಕಸಿದುಕೊಂಡಿದ್ದಾರೆ. ಬಳಿಕ ಆರೋಪಿತನು ಸುಂದರ ಆಚಾರಿ ಅವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಸುಂದರ ಆಚಾರಿ ಅವರು ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




