ಉಡುಪಿ : ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣ ನಡೆದಿದೆ. ಈ ಸಂಬಂಧ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ ಹಂಗರಗಿ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರಸಭೆಯ ಆಸ್ತಿ ತೆರಿಗೆಯನ್ನು ಇ ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನಲ್ಲಿರುವ ನಗರಸಭೆಯ ಖಾತೆಗೆ ಜಮಾ ಮಾಡಲಾಗುತ್ತದೆ. ಫೆ.3 ರಂದು ಕಚೇರಿಯಲ್ಲಿ ತೆರಿಗೆ ಪಾವತಿಯ ವಿವರಗಳನ್ನು ತುಲನೆ ಮಾಡುವಾಗ ಅಧಿಕಾರಿಗಳಿಗೆ ಮೊದಲು ಅನುಮಾನ ವ್ಯಕ್ತವಾಗಿದೆ.
ಜ.28 ರಂದು ಪಾವತಿಯಾಗಿರುವ ಚಲನ್ ಮೇಲೆ ಯೂನಿಯನ್ ಬ್ಯಾಂಕ್ ಸೀಲ್ ಇತ್ತು. ಆದರೆ, ಬ್ಯಾಂಕ್ ಪಾಸ್‌ಬುಕ್ ಅಥವಾ ವಿವರ ಪಟ್ಟಿಯಲ್ಲಿ ಆ ಹಣ ಜಮೆಯಾದ ಬಗ್ಗೆ ಯಾವುದೇ ನಮೂದು ಇರಲಿಲ್ಲ.
ಫೆ.4 ರಂದು ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಜ.28 ರಂದು ಬಳಕೆಯಾಗಿದ್ದ ಅದೇ ಚಲನ್ ಸಂಖ್ಯೆಯನ್ನು ಫೆ.4 ರಂದು ಮತ್ತೆ ಬಳಸಿರುವುದು ಪತ್ತೆಯಾಗಿದೆ. ಎರಡೂ ಚಲನ್ ಗಳ ಮೇಲೆ ಬ್ಯಾಂಕ್ ಸೀಲ್ ಇರುವುದು ಕಂಡುಬಂದಿದೆ.
ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್‌ನ ಅಧಿಕೃತ ಸೀಲ್ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರಿಂದ ತೆರಿಗೆ ಹಣ ಪಡೆದು, ಅವರಿಗೆ ಬ್ಯಾಂಕ್ ಸೀಲ್ ಇರುವ ನಕಲಿ ಚಲನ್ ನೀಡಿ ಆ ಹಣವನ್ನು ನಗರಸಭೆಯ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ವಂಚನೆ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ.



