ಉಡುಪಿ ನಗರ ಪೊಲೀಸರ ಕಾರ್ಯಾಚರಣೆ : ಇಬ್ಬರು ಆರೋಪಿಗಳು ಬಂಧನ….
ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಯೊಬ್ಬರಿಗೆ ಜಾಮೀನು ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಉಮ್ಮರ್ ಫಾರೂಕ್ (ಬಂಟ್ವಾಳ) ಹಾಗೂ ನಿಶಾಂತ್ ಕುಮಾರ್ (ಮಂಗಳೂರು) ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವಿಶೇಷ ಪ್ರಕರಣವೊಂದರಲ್ಲಿ ನೋಮಾನ್ ಎಂಬ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಫಾರೂಕ್ ಎಂಬಾತನು ಪ್ರಶಾಂತ್ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ, ಕೆ.ಟಿ. ಮೊಹಮ್ಮದ್ ಎಂಬವರ ಹೆಸರು ಹಾಗೂ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಫಾರೂಕ್ ತನ್ನ ಸ್ವಂತ ಲಾಭಕ್ಕಾಗಿ ಮತ್ತೊಬ್ಬ ವ್ಯಕ್ತಿಯಂತೆ ನಟಿಸಿ, ನ್ಯಾಯಾಲಯಕ್ಕೆ ಮೋಸ ಮಾಡುವ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿ 2026ರ ಜುಲೈ 30ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮೂಲಕ ನ್ಯಾಯಾಲಯಕ್ಕೆ ಹಾಗೂ ನೈಜ ದಾಖಲೆ ಹೊಂದಿರುವ ಕೆ.ಟಿ. ಮೊಹಮ್ಮದ್ ಮತ್ತು ಪ್ರಶಾಂತ್ ಅವರಿಗೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2026ರಲ್ಲಿ BNS 2023ರ ಕಲಂ 319(2), 336(3), 318(4), 229(1), 340(2) ಹಾಗೂ ಸಂಬಂಧಿತ ಕಾನೂನು ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಗಳಾದ ಉಮ್ಮರ್ ಫಾರೂಕ್ (ಬಂಟ್ವಾಳ) ಹಾಗೂ ನಿಶಾಂತ್ ಕುಮಾರ್ (ಮಂಗಳೂರು) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರೂ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.






