Home Crime ಪೂಜೆ ವೇಳೆ ಸೀರೆಗೆ ಆಕಸ್ಮಿಕ ಬೆಂಕಿ ತಗಲಿ ವೃದ್ಧೆ ಸಾವು…!!

ಪೂಜೆ ವೇಳೆ ಸೀರೆಗೆ ಆಕಸ್ಮಿಕ ಬೆಂಕಿ ತಗಲಿ ವೃದ್ಧೆ ಸಾವು…!!

ಉಡುಪಿ: ಚೂಡಿ ಪೂಜೆ ನೆರವೇರಿಸುತ್ತಿದ್ದಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಾಗಿ ತೀವ್ರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೖತಪಟ್ಟ ಘಟನೆ ನಡೆದಿದೆ.

ಕಿನ್ನಿಮುಲ್ಕಿಯ ವೇಗಸ್‌ ಟೌನ್‌ಶಿಪ್‌ ನಿವಾಸಿ ಜಯಂತಿ ಮಲ್ಯ (80) ಮೖತಪಟ್ಟ ದುರ್ದೈವಿ. ಆಗಸ್ಟ್‌ 16ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯ ಅಂಗಳದ ತುಳಸಿಕಟ್ಟೆಯಲ್ಲಿ ಶ್ರಾವಣ ಮಾಸದ ಚೂಡಿ ಪೂಜೆ ನೆರವೇರಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡು ತೀವ್ರ ಸ್ವರೂಪದ ಗಾಯಗಳಾಗಿದ್ದವು.

ತಕ್ಷಣವೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಜಯಂತಿ ಮಲ್ಯ ಅವರು ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.