ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪೆರುವಾಯಿ ನಿವಾಸಿ ಯತೀಶ್ ಫೆರುವಾಯಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ಸಲ್ಲಿಸಲಾಗಿದ್ದ ಗಡಿಪಾರು ಪ್ರಸ್ತಾವನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಅವರು ಸದ್ಯದ ಮಟ್ಟಿಗೆ ಕೈಬಿಟ್ಟು ಆದೇಶಿಸಿದ್ದಾರೆ.
ಈ ಆದೇಶ ಹೊರಬೀಳುತ್ತಿದ್ದಂತೆ ಯತೀಶ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ) ಹಾಗೂ 55(ಬಿ) ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಜಿಲ್ಲೆಗೆ ಗಡಿಪಾರು ಮಾಡುವಂತೆ ವಿಟ್ಲ ಠಾಣಾ ನಿರೀಕ್ಷಕರು ವರದಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ವಕೀಲರನ್ನು ನಿಯೋಜಿಸದೆ ಖುದ್ದು ಹಾಜರಾಗಿ (Party-in-person) ವಾದ ಮಂಡಿಸಲು ಯತೀಶ್ ಅನುಮತಿ ಕೋರಿದ್ದರು. ನಂತರ ನಡೆದ ವಾದ-ವಿವಾದಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಳೆದ ಒಂದು ವರ್ಷದಿಂದ ಯತೀಶ್ ಯಾವುದೇ ಅನಧಿಕೃತ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲದಿರುವುದನ್ನು ಗಮನಿಸಿ, ಅವರ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಗಡಿಪಾರು ಪ್ರಕ್ರಿಯೆಯನ್ನು ಪ್ರಸ್ತುತ ಹಂತಕ್ಕೆ ಕೈಬಿಟ್ಟಿದ್ದಾರೆ.
ಭವಿಷ್ಯದಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಹೊಸದಾಗಿ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಗಡಿಪಾರು ಭೀತಿಯಿಂದ ಮುಕ್ತಿ ಪಡೆದ ಯತೀಶ್ ಪೆರುವಾಯಿ, ತಮಗೆ ದೊರೆತ ಈ ನ್ಯಾಯಯುತ ತೀರ್ಪಿನ ಆದೇಶ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಿರಾಳತೆ ವ್ಯಕ್ತಪಡಿಸಿದ್ದಾರೆ.
ಸ್ವತಃ ವಾದ ಮಂಡಿಸಿದ ಆರೋಪಿ ಹಿಂದುತ್ವ ಕಾರ್ಯಕರ್ತ..!
ಕಳೆದ 22 ವರ್ಷಗಳಿಂದ ವಿಹಿಂಪ-ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿರುವ ಯತೀಶ್ ಪೆರ್ವಾಯಿ, ತಮ್ಮ ವಿರುದ್ಧ ಆರಂಭಿಸಲಾಗಿದ್ದ ಗಡಿಪಾರು ಪ್ರಕ್ರಿಯೆಯನ್ನು ಸ್ವತಃ ವಾದ ಮಂಡಿಸಿ ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಕೀಯ ಪಿತೂರಿ ಆರೋಪ: ಪ್ರಧಾನಿ ಮೋದಿ ನಿಂದಕರ ವಿರುದ್ಧ ದೂರು, ಪೆರುವಾಯಿಯಲ್ಲಿ ಓಂಕಾರ ಧ್ವಜ ರಕ್ಷಣೆ, ಗೋ ಕಳ್ಳತನ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಗಡಿಪಾರು ಯತ್ನಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.




