Home Karkala News ಕಾರ್ಕಳದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ : ಸುನಿಲ್ ಕುಮಾರ್ ಕಚೇರಿಗೆ ಮುತ್ತಿಗೆ ಯತ್ನ…!!

ಕಾರ್ಕಳದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ : ಸುನಿಲ್ ಕುಮಾರ್ ಕಚೇರಿಗೆ ಮುತ್ತಿಗೆ ಯತ್ನ…!!

ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು….

ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳದಲ್ಲಿ ರಾಜಕೀಯ ವಾತಾವರಣ ಬಿಸಿಯೇರಿದ್ದು, ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಸಚಿವ ನಾಗೇಂದ್ರ ರಾಜೀನಾಮೆ ಬೆಳವಣಿಗೆ ಬೆನ್ನಲ್ಲೇ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದರು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ನೈತಿಕ ಹೊಣೆ ಹೊತ್ತು ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕ್ಷೇತ್ರದ ಅಭಿವೃದ್ಧಿ ಲೋಪಗಳು ಮತ್ತು ಜನರ ಸಮಸ್ಯೆಗಳನ್ನು ಶಾಸಕರು ನಿರ್ಲಕ್ಷಿಸುತ್ತಿದ್ದಾರೆ ಎಂದೂ ಕಾಂಗ್ರೆಸ್ ಮುಖಂಡರು ದೂರಿದರು.

ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಶಾಸಕರ ಕಚೇರಿ ಬಳಿ ತೆರಳಿದರು. ಕಚೇರಿಗೆ ಸ್ಟಿಕರ್ ಅಂಟಿಸಲು ಮತ್ತು ಕಚೇರಿಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಮಧ್ಯಪ್ರವೇಶಿಸಿದರು.

ಸರ್ವಜ್ಞ ವೃತ್ತದಲ್ಲಿ ಕೆಲಕಾಲ ಹೈಡ್ರಾಮ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸರು

ಪ್ರತಿಭಟನಾಕಾರರನ್ನು ಮಾರ್ಗ ಮಧ್ಯೆಯೇ ತಡೆದು ವಶಕ್ಕೆ ಪಡೆದರು.

ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರ-ವಿರೋಧ ಘೋಷಣೆಗಳು ಮೊಳಗಿದವು. ಶಾಸಕರ ಕಚೇರಿ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಕ್ರಿಯೆಯಾಗಿ ಬಿಜೆಪಿ ಕಾರ್ಯಕರ್ತರು ಕೂಡ ಶಾಸಕರ ಕಚೇರಿ ಮತ್ತು ನಿವಾಸದ ಮುಂದೆ ಜಮಾಯಿಸಿ ಪ್ರತಿ-ಪ್ರತಿಭಟನೆ ನಡೆಸಿದರು.

ಘಟನೆ ಹಿನ್ನೆಲೆಯಲ್ಲಿ ಶಾಸಕರ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.