ಪುಣೆ: ಇಂದಿನ ದಿನಮಾನಗಳಲ್ಲಿ ಹುಡುಗಿ-ಹುಡುಗಿ, ಹುಡುಗ-ಹುಡುಗ ಮದುವೆಯಾಗುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಅದೇ ರೀತಿ ಇಲ್ಲೂ ಕೂಡ ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಪರಸ್ಪರ ಪ್ರೀತಿಸಿ ಮದುವೆಯಾಗಲು ಮುಂದಡಿ ಇಟ್ಟಿದ್ದಾರೆ.
ಪುಣೆ ಸಮೀಪದ ಪಿಂಪ್ರಿ-ಚಿಂಚವಾಡ ಪೊಲೀಸ್ ಆಯುಕ್ತಾಲಯದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳು ಈ ರೀತಿ ಮದುವೆಯಾಗಲು ನಿರ್ಧರಿಸಿದ್ದಾರೆ. ಆಗಸ್ಟ್ 30ರಂದು ಆಲಂದಿಯಲ್ಲಿ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಈಗಾಗಲೇ ರಜೆ ಕೋರಿ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಕಾನ್ಸ್‌ಟೇಬಲ್‌ಗಳ ಈ ನಡೆ ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ.
ಪಿಂಪ್ರಿ-ಚಿಂಚವಾಡ 2018ರಲ್ಲಿ ಪೊಲೀಸ್ ಆಯುಕ್ತಾಲಯವಾಗಿ ರಚನೆಯಾದ ನಂತರ ಸೇವೆಗೆ ಸೇರಿದ ಇಬ್ಬರು ಕಾನ್ಸ್‌ಟೇಬಲ್‌ಗಳು ಮೂರು ವರ್ಷಗಳಿಂದ ಒಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಇಬ್ಬರಲ್ಲಿ ಪ್ರೀತಿಯಾಗಿದೆ. ಈಗ ಮದುವೆ ಆಗಲು ಮುಂದಾಗಿದ್ದಾರೆ. ಇದ್ದಕ್ಕಿದ್ದಂತೆ ವಿವಾಹ ಆಹ್ವಾನ ಪತ್ರಿಕೆಯೊಂದಿಗೆ ರಜೆ ಕೋರಿ ಹಿರಿಯ ಅಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಪೊಲೀಸ್ ತರಬೇತಿಯ ನಂತರ ಇಬ್ಬರೂ ಮುಂಬೈನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳೊಂದಿಗೆ ಮನೆಯನ್ನು ಹಂಚಿಕೊಂಡಿದ್ದರು. ನಂತರ ಪಿಂಪ್ರಿ-ಚಿಂಚವಾಡ ಪೊಲೀಸ್ ಆಯುಕ್ತಾಲಯಕ್ಕೆ ವರ್ಗಾವಣೆಗೊಂಡಿದ್ದರು. ಮುಂಬೈನಿಂದ ಸ್ಥಳಾಂತರಗೊಂಡ ನಂತರವೂ ಇಬ್ಬರೂ ಒಟ್ಟಿಗೆ ವಾಸವಿದ್ದರು. ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾಗದ ಮಟ್ಟಿಗೆ ಸಂಬಂಧ ಬೆಳೆಯಿತು. ಪರಸ್ಪರ ದೂರವಾಗುವ ಅಪಾಯ ತಪ್ಪಿಸಲು ಇಬ್ಬರೂ ವಿವಾಹಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ ವಯಸ್ಕರ ನಡುವಿನ ಪರಸ್ಪರ ಒಪ್ಪಿಗೆಯ ಮೇರೆಗಿನ ಸಲಿಂಗ ಸಂಬಂಧಗಳು ಕಾನೂನುಬದ್ಧವಾಗಿವೆ. ಆದರೆ ಪ್ರಸ್ತುತ ವಿವಾಹ ಕಾನೂನುಗಳ ಅಡಿಯಲ್ಲಿ ಸಲಿಂಗ ವಿವಾಹಗಳಿಗೆ ಶಾಸನಬದ್ಧ ಮಾನ್ಯತೆ ಇಲ್ಲ. ಹೀಗಾಗಿ ಇಬ್ಬರು ಕಾನ್ಸ್‌ಟೇಬಲ್‌ಗಳಲ್ಲಿ ಒಬ್ಬರು ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮುಂಬೈನ ಪ್ರಮುಖ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ ಎಂದೂ ವರದಿಯಾಗಿದೆ.




