ಉಡುಪಿ: ಮನೆಯ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸಿದ ಘಟನೆ ಭಾನುವಾರ ಬೆಳಿಗ್ಗೆ ಪೆರಂಪಳ್ಳಿ ಸಮೀಪ ನಡೆದಿದೆ.
ಘಟನೆ ವೇಳೆ ಸಮಯಪ್ರಜ್ಞೆ ಮೆರೆದ ಇಂಜಿನಿಯರ್ ಮನೋಜ್ ಹಾಗೂ ಯುವ ಉದ್ಯಮಿ ಶರತ್ ಅವರು ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆದು ಮನೆಯವರನ್ನು ಹಾಗೂ ಆಸ್ತಿಯನ್ನು ರಕ್ಷಿಸುವಲ್ಲಿ ನೆರವಾದರು.
ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೆಯ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು ಪಕ್ಕದಲ್ಲಿದ್ದ ಎಂಜಿ ಕಾರು ಹಾಗೂ ಸ್ಕೂಟರ್‌ಗೂ ವ್ಯಾಪಿಸತೊಡಗಿತು.
ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮನೆಯ ಯಜಮಾನರು ಬೆಂಕಿ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಸಮೀಪದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಇಂಜಿನಿಯರ್ ಮನೋಜ್ ಬೆಂಕಿ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅದೇ ವೇಳೆ ಮನೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಹಿಮವರ್ಣಂ ಏಷ್ಯನ್ ಪೇಂಟ್ಸ್‌ನ ಯುವ ಉದ್ಯಮಿ ಶರತ್ ಕೂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇಬ್ಬರೂ ಯುವಕರು ಬೆಂಕಿಯ ನಡುವೆಯೇ ಮೊದಲು ಎಂಜಿ ಕಾರನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ನೀರು ಹಾಗೂ ಮಣ್ಣು ಬಳಸಿ ಎಲೆಕ್ಟ್ರಿಕ್ ರಿಕ್ಷಾ ಮತ್ತು ಸ್ಕೂಟರ್‌ಗೆ ವ್ಯಾಪಿಸಿದ್ದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
ಯುವಕರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಬೆಂಕಿ ಮನೆಯ ಇತರ ಭಾಗಗಳಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸುವುದು ತಪ್ಪಿದೆ. ಶೆಡ್‌ನಲ್ಲಿದ್ದ ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಕಾರ್ಯಪ್ರವೃತ್ತರಾದ ಮನೋಜ್ ಮತ್ತು ಶರತ್ ಅವರ ಧೈರ್ಯ ಹಾಗೂ ಸಮಯಪ್ರಜ್ಞೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.




