Home Crime ಮುಂಬಯಿ : ಬಂಟರವಾಣಿ ಪತ್ರಿಕೆಯ ಸಂಪಾದಕರ ಮೇಲೆ ಹಲ್ಲೆ….!!

ಮುಂಬಯಿ : ಬಂಟರವಾಣಿ ಪತ್ರಿಕೆಯ ಸಂಪಾದಕರ ಮೇಲೆ ಹಲ್ಲೆ….!!

ಮುಂಬಯಿ : ನಗರದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಬಂಟರವಾಣಿ ಪತ್ರಿಕೆಯ ಸಂಪಾದಕ ಅಶೋಕ್ ಪಕ್ಕಳ ಮೇಲೆ ಮಾಡಿದ ಹಲ್ಲೆ ಈಗ ಬಾರಿ ಚರ್ಚೆಗೆ ಕಾರಣವಾಗಿದೆ.

ಬಂಟರವಾಣಿ ಪತ್ರಿಕೆಯ ಸಂಪಾದಕ ಆಶೋಕ್ ಪಕ್ಕಳ ಅವರ ಮೇಲಿನ ಹಲ್ಲೆ ಘಟನೆಯ ಕುರಿತು ಪತ್ರಕರ್ತರು ಹಾಗೂ ಕೆಲವು ಹಿರಿಯ ಪತ್ರಕರ್ತರು ಖಂಡಿಸಿದ್ದಾರೆ.

ಮುಂಬೈನ ಪ್ರತಿಷ್ಠಿತ ಬಂಟರ ಸಂಘದೊಳಗೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ಇದೀಗ ಎಲ್ಲೆಡೆ ಬಾರಿ ಸದ್ದು ಮತ್ತು ಸುದ್ದಿ ಮಾಡಲಾರಂಬಿಸಿದೆ. ಸಮುದಾಯದ ಮೊದಲ ಸಾಲಿನ ನಾಯಕರ ನಡುವೆ ಆರೋಪ, ಪ್ರತ್ಯಾರೋಪ, ಅಪನಂಬಿಕೆ ಅಸಮಾಧಾನ ವ್ಯಕ್ತವಾಗಿದೆ.

ಇದೇ ಕಾರಣಕ್ಕಾಗಿ ಸಂಘ ಮತ್ತೊಮ್ಮೆ ಸುದ್ದಿಯಲ್ಲಿದೆ. ಶತಮಾನದ ಹೊಸ್ತಿಲಿನ ಸಂಭ್ರಮಕ್ಕೆ ಸಾಕ್ಷಿಯಾಗಬೇಕಾದ ಸಂಘ ಇದೀಗ ಹಲ್ಲೆ, ದೂರು, ಆರೋಪ-ಪ್ರತ್ಯಾರೋಪಗಳ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ತನ್ಮೂಲಕ ಸಮುದಾಯದ ಎದುರು ಸಂಘ ತಲೆತಗ್ಗಿಸುವಂತಾಗಿದೆ,

ಮುಂಬೈ ಬಂಟರ ಸಂಘದ ಪದಾಧಿಕಾರಿಗಳ ಎರಡು ಗುಂಪುಗಳ ನಡುವೆ ಸಣ್ಣದಾಗಿ ಕಾಣಿಸಿಕೊಂಡಿದ್ದ ಭಿನ್ನಮತ, ಭಿನ್ನಾಭಿಪ್ರಾಯ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರವಾಣಿ ಪತ್ರಿಕೆಯ ಸಂಪಾದಕ ಅಶೋಕ್ ಪಕ್ಕಳ ಮೇಲೆ ಹಲ್ಲೆ ನಡೆಸುವ ಮೂಲಕ ಸ್ಪೋಟಕ ಹಂತ ತಲುಪಿದೆ. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಎರಡು ಪ್ರತ್ಯೇಕ ಗುಂಪುಗಳಾಗಿ ಸಿಡಿದು ನಿಂತಿದ್ದಾರೆ. ಪರಸ್ಪರರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. “ನಾವಾ- ನೀವಾ’ ಎಂಬಂತ ಪರಿಸ್ಥಿತಿ ಸದ್ಯ ಮುಂಬೈ ಬಂಟರ ಸಂಘದಲ್ಲಿದೆ.ಮುಂಬೈನ ಗೋರೆಗಾವ್ ವೆಸ್ಟಿನ್ ಹೋಟೆಲ್‌ನಲ್ಲಿ ನಡೆದ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಐಕಳ ಹರೀಶ್ ಶೆಟ್ಟಿ, ಅಶೋಕ್ ಪಕ್ಕಳ ಮೇಲೆ ಹಲ್ಲೆ ನಡೆಸಿದ್ದರು. ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ನಡುವೆ ಸಣ್ಣದಾಗಿ ಹೊತ್ತಿಕೊಂಡ ಮಾತಿನ ಕಿಡಿ ಪಕ್ಕಳ ಮೇಲಿನ ಹಲ್ಲೆಯಲ್ಲಿ ಕೊನೆಗೊಂಡಿತ್ತು ಎಂದು ತಿಳಿದು ಬಂದಿದೆ.
ಪೊಲೀಸ್ ಘಟನೆ ಕುರಿತಂತೆ ಆರಂಭದಲ್ಲಿ ದೂರು ನೀಡಲು ಅಶೋಕ್ ಹಿಂದೇಟು ಹಾಕಿದ್ದರು. ಬಂಟರ ಸಂಘದ ಕೆಲವು ಪದಾಧಿಕಾರಿಗಳೊಂದಿಗೆ ನಡೆದ ಮಾತುಕತೆಯ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ.

ಅದಾದ ಎರಡು ದಿನಗಳ ನಂತರ ನಡೆದ ಬೆಳವಣಿಗೆಗಳಲ್ಲಿ ಐಕಳ ಹರೀಶ್ ಶೆಟ್ಟಿ ಮುಂಬೈ ಬಂಟರ ಸಂಘಕ್ಕೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿತ್ತು. ಈ ಪತ್ರದಲ್ಲಿ ಅಶೋಕ್ ಹೆಸರು ಮತ್ತು ಘಟನೆಯನ್ನು ಅಶೋಕ್ ಮೇಲಿನ ಹಲ್ಲೆಯನ್ನು ಖಂಡಿಸಿ ಮುಂಬೈ ಬಂಟರ ಸಂಘದ ಪ್ರಮುಖ ಪದಾಧಿಕಾರಿಗಳು ಮತ್ತು ಹಿತೈಷಿ ಉದ್ಯಮಿಗಳ ಗುಂಪೊಂದು ಜನವರಿ ಏಳರಂದು ಸಾಕಿನಾಕಾದ ಹೋಟೆಲ್ ಮೆಟ್ರೋದಲ್ಲಿ ತುರ್ತು ಸಭೆ ನಡೆಸಿದೆ. ಮುಂಬೈನ 9 ಪ್ರಾದೇಶಿಕ ಸಮಿತಿಗಳ ಪೈಕಿ ಆರು ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. “ಬಂಟರ ಸಂಘದ ಗುರುತರ ಸ್ಥಾನದಲ್ಲಿರುವ ವ್ಯಕ್ತಿಯಿಂದ ನಡೆದ ಈ ಹಲ್ಲೆಯನ್ನು ಸಮುದಾಯದವರು ಖಂಡಿಸಬೇಕು” ಎಂಬ ಒಮ್ಮತದ ನಿರ್ಧಾರವನ್ನು ಸಭೆ ಕೈಗೊಂಡಿದೆ. ಪ್ರಾದೇಶಿಕ ಸಮಿತಿ ನಡೆಸುವ ಸಂಘದ ಯಾವುದೇ ಸಭೆ- ಸಮಾರಂಭಗಳಿಗೆ ಐಕಳ ಹರೀಶ್ ಶೆಟ್ಟಿಯನ್ನು ಆಹ್ವಾನಿಸಬಾರದು ಹಾಗೂ ಅವರಿಗೆ ಬಹಿಷ್ಕಾರ ಹಾಕಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ಕಡೆಯಿಂದ ವಾಟ್ಸಪ್‌ನಲ್ಲಿ ನಿರಂತರವಾಗಿ ಹರಿದಾಡುತ್ತಿರುವ ವದಂತಿಗಳು, ಪರ ವಿರೋಧ ಅಭಿಪ್ರಾಯಗಳು, ಮತ್ತೊಂದೆಡೆ ರಪ್ ಅಂತ ಮುಖಕ್ಕೆ ರಾಚುತ್ತಿರುವ ಪೊಲೀಸ್ ಇಲಾಖೆಯ ನೋಟಿಸ್‌ ಇವೆರಡರ ಮಧ್ಯೆ ವ್ಯಕ್ತಿಗತವಾಗಿ ಹರಿದಾಡುತ್ತಿರುವ ಟಿಪ್ಪಣಿಗಳ ವಾಯ್ಸ್ ರೆಕಾರ್ಡ್‌ಗಳು, ಸಮುದಾಯದ ಮುಖಂಡರ -ಅನುಮಾನದ ನೋಟಗಳು, ಮುಂಬೈ ಬಂಟರ ಸಂಘದ ಕೆಲವು ನಾಯಕರ ಸ್ಥಿತಿಯನ್ನು ಅಯೋಮಯವಾಗಿಸಿದೆ.

ಬಂಟರ ಸಂಘದೊಳಗೆ ಅಧಿಕೃತವಾಗಿ ಮೂರು ಗುಂಪುಗಳಿವೆ ಎಂಬುದನ್ನು ಅಲ್ಲಿನ ಸದಸ್ಯರೇ ಒಪ್ಪಿಕೊಳ್ಳುತ್ತಾರೆ. ಯಾರ ಪರ ನಿಲ್ಲಬೇಕು? ಯಾರನ್ನು ವಿರೋಧಿಸಬೇಕು? ಮತ್ತು ಯಾರ ಮಾತು ಕೇಳಬೇಕು ಎಂಬ ಗೊಂದಲ ಅವರಲ್ಲಿದೆ. ಸದ್ಯ ಮುಂಬೈನಲ್ಲಿ ಹರೀಶ್ ಶೆಟ್ಟಿ ಪರ- ವಿರೋಧ ಗುಂಪುಗಳಿವೆ. ಇನ್ನೊಂದು ಗುಂಪು ತಟಸ್ಥವಾಗಿದ್ದು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಅದ್ಯಾಕೋ ಗೊತ್ತಿಲ್ಲ. ನಮ್ಮ ಸಮುದಾಯದ ಮೊದಲ ಸಾಲಿನ ನಾಯಕರೇ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರಾ? ಎಂಬ ಅನುಮಾನ ಆತಂಕ ಸಂಘದ ಅನೇಕ ಸದಸ್ಯರಿಗಿದೆ.

ಒಂದು ಬಂಟರ ಗುಂಪುಗಳ ಪ್ರಕಾರ ಇದೆಲ್ಲಾ ಘಟನೆ ಮುಂದೆ ಬರುವ ಬಂಟರ ಸಂಘದ ಚುನಾವಣೆ ಹಾಗೂ ಅದ್ಯಕ್ಷ ಸ್ಥಾನಕ್ಕೆ ಪೈಪೋಟಿಗಾಗಿ ಹೀಗೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.

ಐಕಳ ಮಾಡಿದ್ದು ತಪ್ಪೆ, ಆದರೆ ಈ ಹಲ್ಲೆ ನಡೆಯ ಬಾರದು ಇತ್ತು. ನಡೆದು ಹೋಯಿತು. ನಂತರ ಐಕಳ ಹರಿಶ್ ಶೆಟ್ಟಿ ಕ್ಷಮೆ ಕೇಳಿದ್ದಾರೆ ಎಂದು ತಿಳಿಯಲಾಗಿದೆ. ಹೀಗೆ ಯಾಕೆ ಆಯಿತು.,? ಎನ್ನುವ ಪ್ರಶ್ನೆ ಎಲ್ಲಾರಲ್ಲಿ ಮೂಡಿದೆ.

ಬಂಟರ ಸಮುದಾಯದ ನಾಲ್ಕು ಮುಖ್ಯ ಸ್ವಾಮೀಜಿಗಳು ಇದ್ದಾರೆ.ಬಂಟರ ಸಮಾಜದಲ್ಲಿ ಪ್ರತಿಷ್ಠಿತ ಗಣ್ಯರು‌ ಇದ್ದಾರೆ. ಇವರೆಲ್ಲಾ ಮುಂದೆ ಬಂದು ಇದನ್ನು ರಾಜಿ ಪಂಚಾಯತಿ ಮಾಡಬೇಕು. ಇದು‌ ಇನ್ನೂ ಮುಂದೆ ಹೋಗದಂತೆ ನೋಡಿಕೊಳ್ಳ ಬೇಕು. ಇಲ್ಲದಿದ್ದರೆ ಈ ಘಟನೆ ಮುಂದೆ ದೊಡ್ಡ ಘರ್ಷಣೆಗೆ ಕಾರಣವಾಗುತ್ತದೆ.

ಒಂದು ಕಾಲದಲ್ಲಿ ಬಂಟರು ಎಂದರೆ ಒಗ್ಗಟ್ಟು, ಒಗಟ್ಟು ಎಂದರೆ ಬಂಟರ ಸಮಾಜ ಎಂದು ಇತ್ತು. ಅದೇ ರೀತಿ ಇನ್ನು ಮುಂದೆ ಬಂಟರು ಒಗ್ಗಟ್ಟಿನಿಂದ ಮುಂದೆ ಹೋಗಲಿ ಎಂದು ಪ್ರೈಮ್ ಟಿವಿ ತಂಡದ ಆಸೆ.