ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಮೊಬೈಲ್ ಫೋನ್, ಚಾರ್ಜರ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಮೂವರು ಜೈಲು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ವಿಧಾನಸಭೆಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕ ಎಸ್. ಟಿ. ಸೋಮಶೇಖರ್ ಅವರು ನಿಯಮ 59 (ಎ) ರ ಅಡಿಯಲ್ಲಿ ಕೇಳಿದ ಶೂನ್ಯ ವೇಳೆಯ ಸೂಚನೆಗೆ ಸರ್ಕಾರ ನೀಡಿರುವ ಅಧಿಕೃತ ಲಿಖಿತ ಉತ್ತರದಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಆಗಸ್ಟ್ 11, 2026 ರಂದು ನಗರ ಅಪರಾಧ ವಿಭಾಗದ (CCB) ಪೊಲೀಸರು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಗರಿಷ್ಠ ಭದ್ರತಾ ವಿಭಾಗ-3ರ ಹಿಂಭಾಗದ ಭಾಗ-1ರ ಕೊಠಡಿ ಸಂಖ್ಯೆ 4 ರಲ್ಲಿ ದಾಖಲಾಗಿದ್ದ ಶಿಕ್ಷಾ ಬಂದಿ ಸಂಖ್ಯೆ 1528 (ಪ್ರಜ್ವಲ್ ರೇವಣ್ಣ) ಬಳಿ 1 ರೆಡ್‌ಮಿ ಸ್ಮಾರ್ಟ್‌ಫೋನ್ (ಸಿಮ್ ಕಾರ್ಡ್ ಸಮೇತ), 1 ಮೊಬೈಲ್ ಚಾರ್ಜರ್, 1 ಡೈರಿ ಹಾಗೂ 1 ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್ ಪತ್ತೆಯಾಗಿವೆ. ಈ ಕುರಿತು ಪ್ರಜ್ವಲ್ ರೇವಣ್ಣ ವಿರುದ್ಧ ಆಗಸ್ಟ್ 11ರಂದೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 319/2026 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಸಹಾಯಕ ಅಧೀಕ್ಷಕರಾದ ಈರಣ್ಣ ರಂಗಾಪುರ, ಜೈಲರ್ ರಾಜೇಶ್ ಧರ್ಮಟ್ಟಿ ಹಾಗೂ ವೀಕ್ಷಕ ಮಹೇಶ್ ಸಜ್ಜನ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಉಪಮಹಾನಿರೀಕ್ಷಕ ಜಿನೇಂದ್ರ ಖನಗಾವಿ (IPS) ಅವರಿಗೆ ಸೂಚಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.
ಪ್ರಜ್ವಲ್ ರೇವಣ್ಣ ಸೇರಿದಂತೆ ಯಾವುದೇ ಬಂದಿಗಳಿಗೆ ಕಾರಾಗೃಹದಲ್ಲಿ ವಿವಿಐಪಿ (VVIP) ಟ್ರೀಟ್‌ಮೆಂಟ್ ನೀಡುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯದ ಜೈಲುಗಳಲ್ಲಿ ಭದ್ರತೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಕೈದಿಗಳನ್ನು ಆಂಗ್ಲ ವರ್ಣಮಾಲೆಯ (Alphabetic) ಮಾದರಿಯಲ್ಲಿ ವಿಂಗಡಿಸಲಾಗಿದೆಯೇ ಹೊರತು ವಿಐಪಿ ಮತ್ತು ಸಾಮಾನ್ಯ ಬಂದಿಗಳೆಂದು ಪ್ರತ್ಯೇಕಿಸಿಲ್ಲ. ಅಲ್ಲದೆ, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಕೈಪಿಡಿ ಹಾಗೂ ಕಾರಾಗೃಹ ಕಾಯ್ದೆಯ ನಿಯಮಾನುಸಾರವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.




