ಬೆಳಗಾವಿ, ಅಕ್ಟೋಬರ್ 11: ನವರಾತ್ರಿಯ ಮೊದಲ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ದುರ್ಗಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ತರಲು ಹೊರಟಿದ್ದ ಯುವಕರ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟು, 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹುಂಚ್ಯಾನಟ್ಟಿ (ಹಂಜಾನಟ್ಟಿ) ಗ್ರಾಮದಲ್ಲಿ ದಸರಾ ಅಂಗವಾಗಿ ದುರ್ಗಾಮಾತಾ ದೌಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಗ್ರಾಮದ ಯುವಕರು ಬೆಳಗಾವಿ ನಗರಕ್ಕೆ ತೆರಳಿ ದುರ್ಗಾ ಮಾತೆಯ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ಜೈಘೋಷದೊಂದಿಗೆ ಊರಿಗೆ ವಾಪಸಾಗುತ್ತಿದ್ದರು.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಣಗುತ್ತಿ ಗ್ರಾಮ ಹಾಗೂ ಹತ್ತರಗಿ ಟೋಲ್ ಗೇಟ್ ಬಳಿ ಇಂದು ಮುಂಜಾನೆ 5:45ರ ಸುಮಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಮೃತರು: ಪ್ರಕಾಶ ವಾಸೇದಾರ (28),ದಾನಪ್ಪ ಜಾಗನೂರೆ (26), ಶಿವಪ್ಪ ಖಾನಾಪುರೆ (30) ಎಲ್ಲರೂ ಹಂಜಾನಟ್ಟಿ ಗ್ರಾಮದ ನಿವಾಸಿಗಳು.
ಗಾಯಗೊಂಡಿರುವ ಆಕಾಶ ಯರಗಟ್ಟಿ, ಶಿವಾನಂದ ಜಾಗನೂರೆ, ಸುನಿಲ್ ಲಬ್ಬಿ, ಉಮೇಶ ಹಂಜಿ, ಮಲ್ಲಿಕಾರ್ಜುನ ಸಂಕೇಶ್ವರಿ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯರ ನೆರವಿನಿಂದ ಬೆಳಗಾವಿಯ BIMS ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೇವಿಯ ಆಗಮನದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.





