ಮಂಗಳೂರು : ನಂತೂರಿನಲ್ಲಿ ಅಪಘಾತಕ್ಕೀಡಾಗಿ ಯುವತಿ ಸಾವಿಗೆ ಕಾರಣವಾಗಿದ್ದ ಖಾಸಗಿ ಬಸ್ ಮತ್ತೆ ಗುರುಪುರ ಕೈಕಂಬದಲ್ಲಿ ಅಪಘಾತಕ್ಕೀಡಾಗಿದೆ. ಬೈಕ್ ಡಿಕ್ಕಿಯಾಗಿದ್ದು ಸವಾರ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಫೆ.4ರಂದು 22 ನಂಬರಿನ ಶ್ರೀ ಗಣೇಶ್ ಹೆಸರಿನ ಖಾಸಗಿ ಬಸ್ ನಂತೂರಿನಲ್ಲಿ ಹೋಗುತ್ತಿದ್ದಾಗ ಸ್ಕೂಟರ್ ಡಿಕ್ಕಿಯಾಗಿ ಹಿಂಬದಿ ಸವಾರೆಯಾಗಿದ್ದ ಯುವತಿ ಬಸ್ಸಿನಡಿಗೆ ಬಿದ್ದು ಸಾವನ್ನಪ್ಪಿದ್ದಳು. ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶ ಉಂಟಾಗಿತ್ತು. ಮರುದಿನ ಕದ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆದಿತ್ತು. ಮೂರು ದಿನಗಳ ಕಾಲ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇಂದು ಮಧ್ಯಾಹ್ನ ವೇಳೆಗೆ ಬಸ್ ವಾಮಂಜೂರು ಮೂಲಕ ಕೈಕಂಬಕ್ಕೆ ಹೋಗಿದ್ದಾಗ ಎಡಬದಿಯಿಂದ ಬಂದ ಬೈಕ್ ಅಡಿಗೆ ಬಿದ್ದಿದೆ ಎನ್ನಲಾಗಿದೆ. ಸವಾರನ ಕಾಲಿಗೆ ಪೆಟ್ಟು ಬಿದ್ದಿದ್ದು ಅದೃಷ್ಟದಿಂದ ಪ್ರಾಣಕ್ಕೆ ತೊಂದರೆಯಾಗಿಲ್ಲ. ಬಳಿಕ, ಬಸ್ ಕಡೆಯವರು ಮತ್ತು ಗಾಯಗೊಂಡ ವ್ಯಕ್ತಿ ಕೇಸು ಇಲ್ಲದೆ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸಂದರ್ಭದಲ್ಲಿ ಬಸ್ಸಿನ ಚಾಲಕ ಮೊನ್ನೆ ಇದ್ದವರಲ್ಲ, ಬೇರೆ ಇದ್ದರೆಂದು ತಿಳಿದುಬಂದಿದೆ. ಆದರೆ ಬೈಕ್ ಬಸ್ಸಿನಡಿಗೆ ಬಿದ್ದ ದೃಶ್ಯದ ಫೋಟೊ ವೈರಲ್ ಆಗಿದ್ದು ಮೊನ್ನೆಯ ಬಸ್ ಮತ್ತೆ ಅಪಘಾತಕ್ಕೀಡಾಗಿದೆ, ಸವಾರ ಗಂಭೀರ ಎಂದು ಸುದ್ದಿ ಹಬ್ಬಿತ್ತು.



