Home Latest ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ…!!

ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ…!!

ಉಡುಪಿ: ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀರಾಘವೇಂದ್ರ ಮಠದ ಸನ್ನಿಧಾನದಲ್ಲಿ ಮಂಗಳವಾರ ಬಹು ವೈಭವದಿಂದ ಜರಗಿತು. ಶ್ರೀ ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ಈ ಸಮಾರಂಭವು ಶಾಸ್ತ್ರೋಕ್ತವಾಗಿ ಆಯೋಜನೆಗೊಂಡಿತ್ತು.

ಪ್ರಾತಃಕಾಲದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮವನ್ನು ವೇದಮೂರ್ತಿ ಶ್ರೀ ನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಶ್ರೀ ಅನಿಲ್ ಅವರು ನಡೆಸಿಕೊಟ್ಟರು. ತದನಂತರ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ. ಲಾತವ್ಯ ಆಚಾರ್ಯರು ನೆರವೇರಿಸಿದರು. ಅಪರಾಹ್ನ ಅನ್ನಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ಶ್ರೀ ರಾಯರ ಮಠದ ಶ್ರೀ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ಶ್ರೀ ಹರಿಕೃಷ್ಣ ಪುನರೂರು, ಶ್ರೀ ಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರು ಪ್ರಹ್ಲಾದ ಆಚಾರ್ಯ, ಶ್ರೀ ಪಿ. ವಾದಿರಾಜ ಆಚಾರ್ಯ, ಶ್ರೀ ಪಿ. ಶ್ರೀನಿವಾಸ ಆಚಾರ್ಯ, ಶ್ರೀ ಪಿ. ವೃಜನಾಥ ಆಚಾರ್ಯ, ಶ್ರೀ ಗೋಪಾಲಕೃಷ್ಣ ಭಟ್ ಒಳಕಾಡು, ಡಾ. ವ್ಯಾಸರಾಜ ತಂತ್ರೀ, ಚೆನ್ನೈನ ಶ್ರೀ ರಾಜಗೋಪಾಲ್, ಶ್ರೀ ರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶ್ರೀಪಾದರ ಪೂರ್ವಾಶ್ರಮದ ಸಹೋದರರು, ಶ್ರೀ ಅಕ್ಷೋಭ್ಯ ಆಚಾರ್ಯ, ಶ್ರೀ ಅರ್ಜುನ ಆಚಾರ್ಯ, ಶ್ರೀ ವಿಶಾಲ ಆಚಾರ್ಯ, ಶ್ರೀ ಶಂಕರನಾರಾಯಣ ಹೊಳ್ಳ ಕುಂದಾಪುರ, ಇಮೇಜ್ ಮೊಬೈಲ್ ಸಂಸ್ಥೆಯ ಶ್ರೀ ಯಾದವ, ಶ್ರೀ ರಾಕೇಶ್ ಹಾಗೂ ಅನೇಕ ಮಹನೀಯರು ಶ್ರೀಪಾದರ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದಿರೆಯ ಕೇಮಾರು ಶ್ರೀ ಸಾಂದೀಪನಿ ಮಠದ ಆಶ್ರಮದಲ್ಲಿಯೂ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯನ್ನು ಆಯೋಜಿಸಿದ್ದರು.