ರಾಜ್ಯಾದ್ಯಂತ ಪತ್ರಕರ್ತರ ಸಂಘಟನೆ ಬಲಪಡಿಸುವ ಹೊಣೆಗಾರಿಕೆ — ಪತ್ರಿಕಾ ಧರ್ಮ, ನ್ಯಾಯ, ಸತ್ಯ ಮತ್ತು ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಸಂಕಲ್ಪ…
ಬೆಂಗಳೂರು: ಪತ್ರಿಕಾ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ಹಾಗೂ ‘ಪೊಲೀಸ್ ವಾರ್ತೆ’ ಪತ್ರಿಕೆಯ ಸಂಪಾದಕ ಸುಭಾಸ್ ಆರ್. ಶೆಟ್ಟಿ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್ (ರಿ), ಬೆಂಗಳೂರು ವತಿಯಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಪತ್ರಕರ್ತರ ಸಂಘಟನೆ, ಪತ್ರಿಕಾ ಸ್ವಾತಂತ್ರ್ಯ, ಪತ್ರಕರ್ತರ ಹಕ್ಕು–ಹಿತಾಸಕ್ತಿ ಹಾಗೂ ಸಮಾಜದ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಧ್ವನಿಯಾಗುವ ನಿಟ್ಟಿನಲ್ಲಿ ಈ ನೇಮಕಾತಿ ಮಹತ್ವ ಪಡೆದಿದೆ. ಸಂಘಟನೆಯ ಚಟುವಟಿಕೆಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಿ, ಪತ್ರಕರ್ತರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಜವಾಬ್ದಾರಿ ಇದೀಗ ಸುಭಾಸ್ ಆರ್. ಶೆಟ್ಟಿ ಅವರ ಹೆಗಲೇರಿದೆ.
ಕರ್ನಾಟಕ ಪ್ರೆಸ್ ಕ್ಲಬ್‌ನ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ್, ಭಟ್ಕಳ ಅವರ ಸೂಚನೆಯ ಮೇರೆಗೆ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಜಿ. ಅವರು ಸುಭಾಸ್ ಆರ್. ಶೆಟ್ಟಿ ಅವರ ನೇಮಕಾತಿಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪತ್ರಿಕಾ ಧರ್ಮವೇ ಮೊದಲ ಆದ್ಯತೆ:
ನೇಮಕಾತಿ ಆದೇಶದಲ್ಲಿ ಪತ್ರಿಕಾ ಕ್ಷೇತ್ರದ ನ್ಯಾಯ, ನೀತಿ, ಸತ್ಯ ಮತ್ತು ಪತ್ರಿಕಾ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದು ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ. ಪತ್ರಕರ್ತನ ವೃತ್ತಿ ಕೇವಲ ಸುದ್ದಿಯನ್ನು ಪ್ರಕಟಿಸುವುದಕ್ಕೆ ಸೀಮಿತವಾಗದೆ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಹಾಗೂ ಜನಸಾಮಾನ್ಯರ ಧ್ವನಿಯಾಗುವ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ.
ಈ ಹಿನ್ನೆಲೆಯಲ್ಲಿ ಸುಭಾಸ್ ಆರ್. ಶೆಟ್ಟಿ ಅವರಿಗೆ ನೀಡಿರುವ ಹೊಸ ಜವಾಬ್ದಾರಿ ಪತ್ರಕರ್ತರ ವಲಯದಲ್ಲಿ ನಿರೀಕ್ಷೆ ಮೂಡಿಸಿದೆ.
ರಾಜ್ಯಾದ್ಯಂತ ಸಂಘಟನೆಗೆ ಬಲ:
ಕರ್ನಾಟಕದ ವಿವಿಧ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಸಂಘಟಿಸುವುದು, ಪ್ರೆಸ್ ಕ್ಲಬ್‌ನ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವುದು ಹಾಗೂ ಪತ್ರಕರ್ತರ ನಡುವೆ ಪರಸ್ಪರ ಸಹಕಾರ ಮತ್ತು ಸಮನ್ವಯ ಬೆಳೆಸುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ.
ವಿಶೇಷವಾಗಿ, ಪತ್ರಕರ್ತರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರೊಂದಿಗೆ ನಿಂತು ಅಗತ್ಯ ಸಹಾಯ–ಸಹಕಾರ ಒದಗಿಸುವುದು, ವೃತ್ತಿಪರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಪತ್ರಕರ್ತರ ಹಕ್ಕು ಮತ್ತು ಹಿತಾಸಕ್ತಿಗಳ ಪರವಾಗಿ ಸಂಘಟಿತ ಧ್ವನಿ ಎತ್ತುವುದು ಪ್ರಮುಖ ಉದ್ದೇಶಗಳಾಗಿವೆ.
ದುರ್ಬಲರ ಧ್ವನಿಯಾಗುವ ಜವಾಬ್ದಾರಿ:
ಪತ್ರಿಕೋದ್ಯಮದ ಸಾಮಾಜಿಕ ಬದ್ಧತೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಸಮಾಜದ ದುರ್ಬಲರು, ಬಡವರು, ಶೋಷಿತರು ಹಾಗೂ ಅಸಹಾಯಕರ ಸಮಸ್ಯೆಗಳಿಗೆ ಧ್ವನಿಯಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಅದೇ ರೀತಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಭ್ರಷ್ಟಾಚಾರ, ಅಕ್ರಮ ಹಾಗೂ ಅನ್ಯಾಯಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಆಶಯವನ್ನು ಸಂಘಟನೆ ವ್ಯಕ್ತಪಡಿಸಿದೆ.
ಸುಭಾಸ್ ಆರ್. ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರ…






