Home Dskshina Kannada ಸುರತ್ಕಲ್ : ಎಂಆರ್‌ಪಿಎಲ್‌ನ ಚಿಮಿಣಿಯಿಂದ ಭಾರೀ ಸದ್ದು ಸಹಿತ ಬೆಂಕಿ : ಭಯಭೀತರಾದ ಗ್ರಾಮಸ್ಥರು…!!

ಸುರತ್ಕಲ್ : ಎಂಆರ್‌ಪಿಎಲ್‌ನ ಚಿಮಿಣಿಯಿಂದ ಭಾರೀ ಸದ್ದು ಸಹಿತ ಬೆಂಕಿ : ಭಯಭೀತರಾದ ಗ್ರಾಮಸ್ಥರು…!!

ಸುರತ್ಕಲ್:‌ ಎಂಆರ್‌ಪಿಎಲ್‌ನ ಚಿಮಿನಿಯಿಂದ ಭಾರೀ ಸದ್ದು ಸಹಿತ ಬೆಂಕಿ ಉಗುಳಿದ ಪರಿಣಾಮ ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ರವಿವಾರ ರಾತ್ರಿ ವರದಿಯಾಗಿದೆ.

ರವಿವಾರ ರಾತ್ರಿ ಏಕಾಏಕಿ ಚಿಮಿನಿಯೊಂದರಲ್ಲಿ ಭಾರೀ ಸದ್ದಿನೊಂದಿಗೆ ಬೆಂಕಿ ಉಗುಳಿದೆ. ಇದರಿಂದ ಜೋಕಟ್ಟೆ ಪರಿಸರದಲ್ಲಿ ಭಾರೀ ಹೊಗೆ ಹಾಗೂ ದುರ್ನಾತ ಬೀರುತ್ತಿತ್ತು. ಘಟನೆಯಿಂದ ಜನರು ಆತಂಕಕ್ಕೆ ಒಳಗಾಗುವಂತಾಯಿತು.

ಪ್ರತಿ ಮಳೆಗಾಲದಲ್ಲೂ ಇಂತಹಾ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ, ಸದ್ದು, ಹೊಗೆ ಸಹಿತ ದುರ್ನಾತ ಬೀರುತ್ತಿದೆ. ಎಂ.ಆರ್‌.ಪಿ.ಎಲ್‌.ಗೆ ಇಲ್ಲಿನ ಜನ ಸಾಮಾನ್ಯರ ಮೇಲೆ ಕಾಳಜಿಯೇ ಇಲ್ಲ. ಕೇವಲ ಅವರು ಕಂಪೆನಿಯ ಲಾಭವಷ್ಟೇ ನೋಡುತ್ತಿದ್ದಾರೆ. ಒಳಗೆ ಪ್ರೊಜೆಕ್ಟ್‌ ನಡೆಯುತ್ತಿದ್ದು, ಅಲ್ಲಿ ಉಳಿದಿರುವ ತ್ಯಾಜ್ಯ ಕೇಮಿಕಲ್‌ ಗಳನ್ನು ಬೆಂಕಿಕೊಟ್ಟು ಈ ರೀತಿ ಬಿಡಲಾಗುತ್ತಿದೆ. ಇದೇ ವಿಚಾರವಾಗಿ ಸಂಸ್ಥೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದಾಗ, ಅವರು ಏನೂ ನಡೆದೇ ಇಲ್ಲ ಎಂಬಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಜೋಕಟ್ಟೆ ಹೋರಾಟ ಸಮಿತಿಯ ಪದಾಧಿಕಾರಿ ಹಾಗೂ ಜೋಕಟ್ಟೆ ಗ್ರಾಮ ಪಂಚಾಯತ್‌ ಸದಸ್ಯ ಅಬೂಬಕರ್‌ ಬಾವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕಾಏಕಿ ಬೃಹದಾಕಾರದ ಬೆಂಕಿ, ದಟ್ಟಹೊಗೆ, ಸದ್ದು ಏಕಕಾಲದಲ್ಲಿ ಕಾಣಿಸಿಕೊಂಡಿದ್ದು, ಇದು ಜೋಕಟ್ಟೆಯಿಂದ ದೂರದಲ್ಲಿರುವ ಸುರತ್ಕಲ್‌ ವರೆಗೂ ಗೋಚರಿಸುತ್ತಿತ್ತು.

ಇದರಿಂದಾಗಿ ಜನರು ಹೆದರಿದ್ದಾರೆ. ಸಂಸ್ಥೆಗಳು ಈ ಬಗ್ಗೆ ಯಾರಿಗೂ ಸ್ಪಷ್ಟನೆ ನೀಡುತ್ತಿಲ್ಲ. ಜನವಸತಿ ಪ್ರದೇಶದಲ್ಲಿ ಇರುವ ಕಂಪೆನಿ ಬೇಜವಾಬ್ದಾರಿ ಪ್ರದರ್ಶಿಸುವುದು ಸರಿಯಲ್ಲ. ಕಂಪೆನಿ ಅಥವಾ ಜಿಲ್ಲಾಡಳಿತ ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಜೋಕಟ್ಟೆ ನಾಗರೀಕ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.