Home Crime ಮಂಗಳೂರು : ತನ್ನ ತಾಯಿಗೆ ಮನಬಂದಂತೆ ಥಳಿಸಿದ ಮಗಳು…!!

ಮಂಗಳೂರು : ತನ್ನ ತಾಯಿಗೆ ಮನಬಂದಂತೆ ಥಳಿಸಿದ ಮಗಳು…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಸಮೀಪ ಮಗಳೊಬ್ಬಳು ತನ್ನ ತಾಯಿಯನ್ನು ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿರುವ ಘಟನೆ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಸಂಭವಿಸಿದೆ.

ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ಕಳೆದ ಆರೇಳು ವರ್ಷಗಳಿಂದ ವಾಸಿಸುತ್ತಿರುವ ಉತ್ತರ ಕರ್ನಾಟಕ ಮೂಲದ ನಿರ್ಮಲಾ ಎಂಬವರ ಕುಟುಂಬದ ಕದನ ಈಗ ಬೀದಿಗೆ ಬಂದಿದೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ನಿರ್ಮಲಾ ಮತ್ತು ಮಗಳು ನೇತ್ರಾವತಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಕಳೆದ ಬುಧವಾರ ಜಗಳ ಮಿತಿಮೀರಿದೆ. ನಿರ್ಮಲಾ ಪ್ರತಿದಿನ ಮೂಡುಶೆಡ್ಡೆ ಗ್ರಾಮ‌ ಪಂಚಾಯಿತಿಗೆ ಆಗಮಿಸಿ ಮಗಳ ವಿರುದ್ಧ ದೂರು ನೀಡುತ್ತಿದ್ದರು. ಪಂಚಾಯಿತಿಯವರು ತಾಯಿಗೆ ಸಮಾಧಾನ ಮಾಡಿ ವಾಪಸ್ ಕಳುಹಿಸುತ್ತಿದ್ದರು. ಆದರೆ, ಬುಧವಾರದಂದು ಮತ್ತೆ ಪಂಚಾಯಿತಿಗೆ ಬಂದ ನಿರ್ಮಲಾ ಅವರಿಗೆ ಮಗಳು ನೇತ್ರಾವತಿ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ತನ್ನ ವಂಶವೃಕ್ಷದಿಂದ ಮಗಳ ಹೆಸರನ್ನು ತೆಗೆಯುವಂತೆ ನಿರ್ಮಲಾ ಪಂಚಾಯಿತಿ ಸಿಬ್ಬಂದಿ ಬಳಿ ಕೇಳಿಕೊಂಡಿದ್ದು, ಮಗಳೂ ತೆಗೆಯುವಂತೆ ಪಟ್ಟು ಹಿಡಿದಿದ್ದಾಳೆ. ಈ ವೇಳೆ ಪಂಚಾಯಿತಿಯವರು ಈ ಕೆಲಸ ಇಲ್ಲಿ ಆಗಲ್ಲ ಹೋಗಿ ಅಂತಾ ಹೇಳಿದ್ದಾರೆ. ಪಂಚಾಯಿತಿ ಒಳಗೆಯೇ ಜಗಳ ಶುರುಹಚ್ಚಿಕೊಂಡಿದ್ದ ತಾಯಿ-ಮಗಳನ್ನು ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ಅಷ್ಟರಲ್ಲೇ ತಾಯಿ ಮೇಲೆ ಏಕಾಏಕಿ ದಾಳಿಗೆ ಮಗಳು ನೇತ್ರಾವತಿ ಮುಂದಾಗಿದ್ದಾಳೆ. ಪಂಚಾಯಿತಿ ಆವರಣಕ್ಕೆ ದೂಡಿ, ಬಳಿಕ ಚಪ್ಪಲಿಯಿಂದ ಮನಬಂದಂತೆ ತಾಯಿಗೆ ಥಳಿಸಿದ್ದಾಳೆ. ಈ ದೃಶ್ಯವನ್ನು ಪಂಚಾಯಿತಿ ಸಿಬ್ಬಂದಿ ತಮ್ಮ‌ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.

ನಿರ್ಮಲಾ ಅವರಿಗೆ ಮಗಳು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ. ಆದರೆ, ತಾಯಿ-ಮಗಳ ರಂಪಾಟಕ್ಕೆ ಗಂಡ ಸೇರಿದಂತೆ ಇಬ್ಬರು ಮಕ್ಕಳೂ ಈಗ ದೂರವಾಗಿದ್ದಾರೆ.‌ ಮಗಳು ನೇತ್ರಾವತಿ ಬೆಂಗಳೂರಿನಲ್ಲಿದ್ದು, ಬುಧವಾರ ಬೆಳಗ್ಗೆಯಷ್ಟೇ ಮೂಡುಶೆಡ್ಡೆಯ ಮನೆಗೆ ಬಂದಿದ್ದಳು. ಮತ್ತೆ ಜಗಳವಾಗಿ ಹೊಡೆದಾಟಕ್ಕೆ ಕಾರಣವಾಗಿದೆ. ತಾಯಿ-ಮಗಳ ಗಲಾಟೆ ಹಲವು ಬಾರಿ ಕಾವೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರು ರಾಜಿ ಮಾಡಿ ವಾಪಸ್ ಕಳುಹಿಸಿದ್ದರು.

ಈ ಬಗ್ಗೆ ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ತಾಯಿ-ಮಗಳ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವೀಡಿಯೋ ಮಾಡಿ ಅದಕ್ಕೆ ಹೆಚ್ಚು ವೀಕ್ಷಣೆ ಬರುವ ಉದ್ದೇಶದಿಂದ ವೈರಲ್ ಮಾಡಿದ ವ್ಯಕ್ತಿಯ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.