Home Crime ಜೈಲು ಜಾಮ‌ರ್ ಜಂಜಾಟ : ಸಾರ್ವಜನಿಕರಿಗೆ ಸಂಕಷ್ಟ, ಹೈಕೋರ್ಟ್‌ನಿಂದ ಪರಿಶೀಲನೆಗೆ ಆದೇಶ…!!

ಜೈಲು ಜಾಮ‌ರ್ ಜಂಜಾಟ : ಸಾರ್ವಜನಿಕರಿಗೆ ಸಂಕಷ್ಟ, ಹೈಕೋರ್ಟ್‌ನಿಂದ ಪರಿಶೀಲನೆಗೆ ಆದೇಶ…!!

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್‌ ಸಿಗ್ನಲ್ ಜಾಮರ್‌ನಿಂದ ಸುತ್ತಲಿನ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಉಂಟಾಗಿರುವ ಕುರಿತು, ಸುತ್ತಮುತ್ತಲಿನ ಮೊಬೈಲ್ ನೆಟ್ವರ್ಕ್ ಸಾಮರ್ಥ್ಯವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಂಗಳೂರು ವಕೀಲರ ಸಂಘವು ಕಳೆದ ಮಾರ್ಚ್‌ನಿಂದ ನ್ಯಾಯಾಲಯಗಳ ಸಂಕೀರ್ಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಾಗಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಈ ಅರ್ಜಿಯ ವಿಚಾರಣೆ ಮಂಗಳವಾರ ಆರಂಭಗೊಂಡಿತು.

ಸಂಘದ ಪರವಾಗಿ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿದರು. ಕೈದಿಗಳು ಕಾರಾಗೃಹದೊಳಗೆ ಮೊಬೈಲ್ ಬಳಸುವುದನ್ನು ತಡೆಯುವ ಉದ್ದೇಶದಿಂದ ಜಾಮ‌ರ್ ಅಳವಡಿಸಲಾಗಿದೆ. ಆದರೆ, ವಾಸ್ತವದಲ್ಲಿ ಕೈದಿಗಳಿಗೆ ಮೊಬೈಲ್ ನೆಟ್‌ವರ್ಕ್ ಇನ್ನೂ ಲಭ್ಯವಿದೆ ಎಂಬ ಮಾಹಿತಿ ಇದೆ. ಇದರ ಬದಲಿಗೆ, ಕಾರಾಗೃಹದ ಹೊರಗಡೆ ನ್ಯಾಯವಾದಿಗಳು ಹಾಗೂ ಸಾರ್ವಜನಿಕರಿಗೆ ನೆಟ್ವರ್ಕ್‌ ಸಮಸ್ಯೆಯಿಂದಾಗಿ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯಾಲಯದ ಕಲಾಪಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗಲೂ ನ್ಯಾಯವಾದಿಗಳಿಗೆ ನಿರಂತರ ಅಡ್ಡಿಯಾಗುತ್ತಿದೆ ಎಂದು ಹೆಗ್ಡೆ ನ್ಯಾಯಾಲಯಕ್ಕೆ ತಿಳಿಸಿದರು.

ವಾದ ಆಲಿಸಿದ ನ್ಯಾಯಾಧೀಶರು, ಕಾರಾಗೃಹ, ನ್ಯಾಯಾಲಯ ಹಾಗೂ ಸುತ್ತಲಿನ ಪರಿಸರದಲ್ಲಿರುವ ಮೊಬೈಲ್‌ ನೆಟ್‌ವರ್ಕ್ ಸಾಮರ್ಥ್ಯದ ಬಗ್ಗೆ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬ‌ರ್ 18ಕ್ಕೆ ನಿಗದಿಪಡಿಸಲಾಗಿದೆ. ಕಾರಾಗೃಹದ ಸುತ್ತಲಿನ ಒಂದು ಕಿಲೋಮೀಟರ್‌ಗೂ ಹೆಚ್ಚು ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು, ಇದು ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ನ್ಯಾಯಾಲಯಗಳು ಸೇರಿದಂತೆ ನಗರದ ಕೇಂದ್ರ ಭಾಗದಲ್ಲಿನ ದೈನಂದಿನ ವ್ಯವಹಾರ ಹಾಗೂ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.