ಬಂಟ್ವಾಳ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಎಂಬಲ್ಲಿ ಕಾರ್ಯಚರಿಸುತ್ತಿದ್ದ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿಸಿ ಹಣ ಮತ್ತು ಚಿನ್ನಾಭರಣಗಳ ಕಳವಿಗೆ ಯತ್ನಿಸಿದ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಆರೋಪಿಗಳ ಪೈಕಿ ಬಂಟ್ವಾಳ ತಾಲೂಕಿನ ಮಾರಿಪಳ್ಳ ನಿವಾಸಿ ಮುಹಮ್ಮದ್ ಶಾಖಿರ್ (33) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜು.22ರಂದು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
2026ರ ಜೂನ್ 13ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆಯಲ್ಲಿ ಕಾರ್ಯಚರಿಸುತ್ತಿದ್ದ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿಸಿ ನಗ-ನಗದು ದೋಚಲು ವಿಫಲ ಯತ್ನ ನಡೆಸಲಾಗಿತ್ತು.
ಈ ಕುರಿತು ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.




