ಸಚ್ಚೇರಿಪೇಟೆ: ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯು ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.
1966ರಲ್ಲಿ ಸಚ್ಚೇರಿಪೇಟೆ ನಾರಾಯಣ್ ನಾಯಕ್‌ರವರ ನೇತೃತ್ವದಲ್ಲಿ ಉತ್ಸಾಹಿ ಯುವಕರೊಂದಿಗೆ ಸ್ಥಾಪನೆಯಾದ ಯಕ್ಷಗಾನ ತಂಡವು, 2016ರಲ್ಲಿ ಸ್ಥಾಪಕಾಧ್ಯಕ್ಷ ಸಚ್ಚೇರಿಗುತ್ತು ಜಗನ್ನಾಥ ಶೆಟ್ಟಿ , ಪ್ರಸಕ್ತ ಗೌರವಾಧ್ಯಕ್ಷ ಸಚ್ಚರಪರಾರಿ ಸುಬೋಧ ಶೆಟ್ಟಿ, ಅಧ್ಯಕ್ಷ ಶ್ರೀಧರ ಸನಿಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಎಸ್. ಕುಮಾರ್ ಮತ್ತು ತಂಡದೊಂದಿಗೆ ಸಚ್ಚೇರಿಪೇಟೆಯ ಗಾಂಧಿ ಮೈದಾನದಲ್ಲಿ ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಆಚರಿಸಲಾಯಿತು.
ಒಟ್ಟು 23 ಸದಸ್ಯರು ಸೇವೆ ಸಲ್ಲಿಸುತ್ತಿರುವ ಈ ಮಂಡಳಿಯು 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಮಂಡಳಿಯು ವರ್ಷಂಪ್ರತಿ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಜೊತೆಗೆ ಸ್ಥಳೀಯ ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಸಾರ್ವಜನಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಸಮಾಜಕ್ಕೆ ಪ್ರಯೋಜನವಾಗುವಂತಹ ವಿವಿಧ ಶಿಬಿರಗಳನ್ನು ಮಂಡಳಿಯ ವತಿಯಿಂದ ನಡೆಸಲಾಗುತ್ತಿದೆ.
ಯಕ್ಷಗಾನ ಬಯಲಾಟದ ಜೊತೆಗೆ, ಯಕ್ಷಗಾನ ಕಲೆಯ ಉಳಿವಿಗಾಗಿ ಮಕ್ಕಳಿಗೆ ನಾಟ್ಯ ಹಾಗೂ ಹಿಮ್ಮೇಳ ತರಬೇತಿ ಶಿಬಿರಗಳನ್ನು ಕೂಡ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮಗೆ ತುಂಬಾ ಸಂತಸವಾಗಿದೆ ಎಂದು ಮಂಡಳಿಯ ಗೌರವಾಧ್ಯಕ್ಷ ಸಚ್ಚರಪರಾರಿ ಸುಬೋಧ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



