Home Crime ಶಿರ್ವ: ಕಬ್ಬಿಣದ ಸೆಂಟ್ರಿಂಗ್‌ ಶೀಟ್ ಕಳವು :  ಅಂತರ್ ಜಿಲ್ಲಾ ಕಳ್ಳ ಅರೆಸ್ಟ್…!!

ಶಿರ್ವ: ಕಬ್ಬಿಣದ ಸೆಂಟ್ರಿಂಗ್‌ ಶೀಟ್ ಕಳವು :  ಅಂತರ್ ಜಿಲ್ಲಾ ಕಳ್ಳ ಅರೆಸ್ಟ್…!!

ಶಿರ್ವ : ಉಡುಪಿ ಜಿಲ್ಲೆಯ ಶಿರ್ವ ಸಮೀಪ ಕಳೆದ ಒಂದು ವಾರದ ಹಿಂದೆ ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ಮನೆಯೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್‌ ಶೀಟುಗಳನ್ನು ಕಳ್ಳತನಗೈದ ಪ್ರಕರಣವನ್ನು‌ ಬೇಧಿಸಿದ ಶಿರ್ವ ಪೊಲೀಸರು, ಓರ್ವ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೈಂದೂರಿನ ಶಿರೂರು ಗ್ರಾಮದ ರಶೀದ್‌ ಯಾನೆ ರಶೀದ್‌ ಮೊಯಿದ್ದೀನ್‌(40) ಎಂದು ಗುರುತಿಸಲಾಗಿದೆ.

ಅ.3ರಿಂದ ಅ.6ರ ಮಧ್ಯೆ ಕಳ್ಳತನ ನಡೆದಿತ್ತು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟಕಲ್‌ ಹಾಗೂ ಪಂಜಿಮಾರ್‌, ಪಡುಬಿದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎಲ್ಲೂರು ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್‌ಬೆಳ್ತೂರ್‌ ಎಂಬಲ್ಲಿ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ. ಬಂಧಿತನಿಂದ 300 ಕಬ್ಬಿಣದ ಶೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಮಹಿಂದ್ರ ಸುಪ್ರೋ ವಾಹನ ಸೇರಿ ಒಟ್ಟು 5,50,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಆರೋಪಿಯ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 30 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.