ಕಾರ್ಕಳ: ಶಾಂಭವಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಸಮೀಪದ ಪೊಸ್ರಾಲು ಶೆಟ್ಟಿಬೆಟ್ಟುವಿನಲ್ಲಿ ನಡೆದಿದೆ.
ಮೃತರನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ಇಷಾನ್ ಪಾಷಾ (40) ಎಂದು ಗುರುತಿಸಲಾಗಿದೆ. ಅವರು ಸುಮಾರು ಏಳು ತಿಂಗಳ ಹಿಂದೆ ಎರಡನೇ ವಿವಾಹವಾಗಿದ್ದು, ಪತ್ನಿಯೊಂದಿಗೆ ಜಾರಿಗೆಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದು ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಅವರಿಗೆ ಮದ್ಯಪಾನದ ಅಭ್ಯಾಸವಿದ್ದು, ಪತ್ನಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮೇ 25ರಂದು ತಂಗಿಯ ಮನೆಗೆ ತೆರಳಿ ಬಳಿಕ ಜಾರಿಗೆಕಟ್ಟೆಯ ಮನೆಗೆ ವಾಪಸ್ ಬಂದಿದ್ದ ಇಷಾನ್ ಪಾಷಾ, ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದು, ಮೇ 28ರಂದು ಸಂಜೆ ಶಾಂಭವಿ ನದಿಯಲ್ಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ಕಾಲು ಜಾರಿ ನದಿಗೆ ಬಿದ್ದಿರಬಹುದಾಗಿಯೂ ಅಥವಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿಯೂ ಶಂಕಿಸಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




