Home Latest ನಿರ್ಮಾಣ ಹಂತದಲ್ಲಿರುವ ರಾ. ಹೆ. ಮಲ್ಪೆ ಬಂದರು ಚತುಷ್ಪತ ರಸ್ತೆ ಕಾಮಗಾರಿ ವಿಳಂಬ…!!

ನಿರ್ಮಾಣ ಹಂತದಲ್ಲಿರುವ ರಾ. ಹೆ. ಮಲ್ಪೆ ಬಂದರು ಚತುಷ್ಪತ ರಸ್ತೆ ಕಾಮಗಾರಿ ವಿಳಂಬ…!!

ಹೊಂಡಮಯ ರಸ್ತೆಯಲ್ಲಿ ಸಂಚಾರ ಸಂಕಷ್ಟ; ಮೀನುಗಾರಿಕೆ ಋುತು ಆರಂಭಕ್ಕೆ ಮುನ್ನ ಸಂಚಾರ ಸುಗಮವಾಗಲಿ..

ಮಲ್ಪೆ : ಉಡುಪಿ ನಗರದ ಮಲ್ಪೆ ಮೀನುಗಾರಿಕಾ ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಆದಿಉಡುಪಿ ಮಲ್ಪೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹೊಂಡ ಗುಂಡಿಗಳಿಂದ ಸ್ಥಳೀಯ ನಾಗರಿಕರು, ಮೀನುಗಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದರೂ ಇನ್ನು ಕುಂಟುತ್ತಾ ಸಾಗುತ್ತಿದೆ. ಆದಿಉಡುಪಿಯಿಂದ ಮಲ್ಪೆಯವರೆಗೆ ಹಲವು ಭಾಗಗಳಲ್ಲಿ ಕಾಮಗಾರಿ ಅರೆಬರೆ ಪೂರ್ಣಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರಆಕ್ರೋಶ ವ್ಯಕ್ತವಾಗಿದೆ.

ಇಲಾಖೆಯ ಬೇಜವಾಬ್ದಾರಿ:
ಇನ್ನೇನು ಕೆಲವೇ ದಿನಗಳಲ್ಲಿ ಮೀನುಗಾರಿಕೆಯ ನಿಷೇಧ ಅವಧಿ ಮುಕ್ತಾಯಗೊಂಡು, ಮುಂದಿನ ಋುತುವಿನ ಬಿರುಸಿನ ಮೀನುಗಾರಿಕಾ ಚಟುವಟಿಕೆಗಳು ಆರಂಭವಾಗಲಿವೆ. ಸಾವಿರಾರು ಲಾರಿಗಳು, ಟೆಂಪೋಗಳು ಈ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಒಟ್ಟಿನಲ್ಲಿ ಋುತು ಆರಂಭವಾಗುವ ಮುನ್ನ ಮುಗಿಯ ಬೇಕಾಗಿದ್ದ ರಸ್ತೆ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವುದು ಸಂಬಂಧಪಟ್ಟಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

10 ನಿಮಿಷದ ದಾರಿಗೆ ಅರ್ಧ ಗಂಟೆ:
ಮಲ್ಪೆಯಿಂದ ಕಲ್ಮಾಡಿಯವರೆಗೆ ದ್ವಿಚಕ್ರ ವಾಹನದಲ್ಲಿ ತೆರಳಲು ಸಾರ್ವಜನಿಕರು ಬರೋಬ್ಬರಿ 30 ನಿಮಿಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ರಸ್ತೆಯ ತುಂಬಾ ಬಿದ್ದಿರುವ ಹೊಂಡ-ಗುಂಡಿಗಳು, ಅರ್ಧಕ್ಕೆ ನಿಂತ ಕಾಮಗಾರಿಯಿಂದಾಗಿ ಜೀವ ಭಯದಿಂದ ಸಂಚರಿಸಬೇಕಾಗಿದೆ. ಬಿಸಿಲು ಬಂದಾಗ ಧೂಳುಮಯ, ಮಳೆಗೆ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಮಕ್ಕಳು ನಡೆದಾಡುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ಪರಿಸ್ಥಿತಿಗೆ ಅನುಗುಣವಾಗಿ ಸದ್ಯಕ್ಕೆ ತಾತ್ಕಾಲಿಕ ಪರಿಹಾರವನ್ನು ಮಾಡದಿರುವುದು ಬಹಳ ಬೇಸರದ ಸಂಗತಿ ಎಂದು ಪಡುಕರೆ ಯುವಕ ಮಂಡಲದ ಅಧ್ಯಕ್ಷ ಸುರೇಶ್‌ ಮೆಂಡನ್‌ ಬೇಸರ ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕರಿಂದ ಪ್ರತಿಭಟನೆಯ ಎಚ್ಚರಿಕೆ..!

ಮಲ್ಪೆ ಬಂದರಿನಲ್ಲಿರುವ ಸಾವಿರಾರು ಸಂಖ್ಯೆಯ ಬೋಟುಗಳಲ್ಲಿನ ಮೀನು ಇಳಿಸುವ ಕೆಲಸವನ್ನು ಮಲ್ಪೆ ಕನ್ನಿಮೀನುಗಾರರ ಸಂಘದ ನಿರ್ವಹಿಸುತ್ತಿದೆ. ರಸ್ತೆ ದುರಾವಸ್ಥೆಯಿಂದ ಮೀನು ಸಾಗಾಟಕ್ಕೆ ತೊಂದರೆ ಉಂಟಾಗಿ ಮೀನುಗಾರಿಕೆಗೂ ದೊಡ್ಡ ಹೊಡೆತ ಉಂಟಾಗಲಿದೆ. ಸಂಬಂಧಪಟ್ಟಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಮಲ್ಪೆ-ಕಲ್ಮಾಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಮುಂದಿನ ಮೀನುಗಾರಿಕಾ ಋುತು ಆರಂಭವಾಗುವ ಮೊದಲೇ ರಸ್ತೆ ಸುಗಮ ಸಂಚಾರಕ್ಕೆ ಮುಕ್ತವಾಗಿಸದಿದ್ದರೆ, ಸಮಸ್ತ ಮೀನುಗಾರರು, ಮಹಿಳೆಯರು, ಸಾರ್ವಜನಿಕರೆಲ್ಲರೂ ಸೇರಿ ಉಗ್ರ ಹೋರಾಟ ಹಾಗೂ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಿ ಮೀನುಗಾರರ ಸಂಘದ ಪ್ರ. ಕಾರ್ಯದರ್ಶಿ ಧನಂಜಯ ಕಾಂಚನ್‌ ಎಚ್ಚರಿಸಿದ್ದಾರೆ.

ಶೀಘ್ರವೇ ಕ್ರಮ ಕೈಗೊಳ್ಳಿ:
ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯು ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ. ಮುಂದಿನ ತಿಂಗಳು ಮೀನುಗಾರಿಕೆ ಋುತು ಆರಂಭವಾಗಲಿದೆ. ಕೋಟ್ಯಾಂತರ ವ್ಯವಹಾರ ನಡೆಯುವ ಬಂದರಿಗೆ ಇದೇ ಪ್ರಮುಖ ರಸ್ತೆಯಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತದೆ. ಮಂಜುಗಡ್ಡೆಯನ್ನು ಟೆಂಪೋಗಳು ಈ ರಸ್ತೆಯಲ್ಲಿ ತರುವ ಹಾಗಿಲ್ಲ.ಇದೇ ರೀತಿಯಾದರೆ ಮೀನುಗಾರಿಕೆಗೂ ದೊಡ್ಡ ಮಟ್ಟದ ಹೊಡೆತವಾಗಲಿದೆ. ಹಾಗಾಗಿ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷರಾದ ದಯಕರ ವಿ ಸುವ ಆಗ್ರಹಿಸಿದ್ದಾರೆ.