ಕೊಲ್ಲೂರು : ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿನ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹೇಮಂತ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ದಿನಾಂಕ 17-05-2026 ರಂದು ಉಡುಪಿ ಜಿಲ್ಲೆ, ಬೈಂದೂರು ತಾಲೂಕು, ಕೊಲ್ಲೂರು ಗ್ರಾಮ ವ್ಯಾಪ್ತಿಯ ದಳಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಯವರು ಮೃತಪಟ್ಟ ಕುರಿತಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 37/2026 ರಂತೆ ಪ್ರಕರಣ ದಾಖಲಾಗಿರುತ್ತದೆ.
ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೈಮೇಲಿನ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಬಗ್ಗೆ ಶ್ರೀಕುಮಾರ ಎಂಬುವವರು ನೀಡಿದ ದೂರಿನ ಸಾರಾಂಶದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 38/2026 ಕಲಂ: 303 (2) BNS ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಹೆಚ್. ಡಿ. ಕುಲಕುರ್ಣಿ, ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮತ್ತು ಶಿವಕುಮಾರ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತ ರವರ ನಿರ್ದೇಶನದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ ಎಂ. ಕೊರ್ಲಹಳ್ಳಿ, ನಾಗೇಂದ್ರ ಹೆಚ್‌ಸಿ, ಲಕ್ಷ್ಮಣ ಗಾಣಿಗ ಹೆಚ್‌ಸಿ, ರಾಘವೇಂದ್ರ ಹೆಚ್‌ಸಿ, ನಾಗರಾಜ ಪಿಸಿ ರವರುಗಳು ಸಿಸಿಟಿವಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯಾದ ಹೇಮಂತ(40), ತಂದೆ: ನರಸಿಂಹ ಶೆಟ್ಟಿ ವಾಸ: ಕಲ್ಯಾಣಿಗುಡ್ಡೆ, ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಈತನನ್ನು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಆತನಿಂದ 1) 3.910 ಗ್ರಾಂ ತೂಕದ 1 ಉಂಗುರ ಮೌಲ್ಯ ರೂಪಾಯಿ 57,000/-, 2) 3.450 ಗ್ರಾಂ ತೂಕದ 1 ಬಳೆ ಮೌಲ್ಯ ರೂಪಾಯಿ 50,000/- ಸಾವಿರ ಮತ್ತು 3) 7.160 ಗ್ರಾಂ ತೂಕದ 1 ಸರ ಮೌಲ್ಯ ರೂಪಾಯಿ 1,00,000/- ವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.





