ಬೆಳ್ತಂಗಡಿ : ಪ್ರಸಿದ್ಧ ಪ್ರವಾಸಿ ತಾಣವಾದ ಜಲಪಾತದ ಬಳಿ ತಮ್ಮೊಂದಿಗೆ ಬಂದಿದ್ದ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳ ಮೂಲದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಫೀರ್ (18) ಬಂಧಿತ ಆರೋಪಿಗಳಾಗಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ಈ ಮೂವರು ಯುವಕರೊಂದಿಗೆ ಬೆಳ್ತಂಗಡಿಯ ದಿಡುಪೆ ಜಲಪಾತವನ್ನು ನೋಡಲು ಪ್ರವಾಸಕ್ಕೆ ತೆರಳಿದ್ದರು. ಜಲಪಾತದ ಸಮೀಪ ತಲುಪುತ್ತಿದ್ದಂತೆ ಯುವಕರು ತಮ್ಮ ಜೊತೆಯಲ್ಲೇ ಬಂದಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಯುವಕರ ಈ ವಿಕೃತ ಚೇಷ್ಟೆಯನ್ನು ಯುವತಿಯರು ತೀವ್ರವಾಗಿ ಪ್ರತಿರೋಧಿಸಿದ್ದಾರೆ. ಯುವತಿಯರ ಕೂಗಾಟ ಹಾಗೂ ಗಲಾಟೆಯನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕರನ್ನು ತಡೆದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.




