ವಿಟ್ಲ: ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ, ಮರಳಿನ ಸಮೇತ ವಶಪಡಿಸಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಬೈರಿಕಟ್ಟೆ ಎಂಬಲ್ಲಿ ನಡೆದಿದೆ
ವಾಹನದ ಚಾಲಕ, ಕೊಳ್ನಾಡು ನಿವಾಸಿ ರೆನೋಲ್ ಮೆಲ್ರೋಯ್ ಡಿಸೋಜ (31) ಎಂಬಾತನನ್ನು ಬಂಧಿಸಲಾಗಿದೆ.
ಮೇ 18ರಂದು ರಾತ್ರಿ ವಿಟ್ಲ ಸಮೀಪದ ಕುಡ್ತಮುಗೇರು ಹೊಳೆಯಿಂದ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಲಭಿಸಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ತಮ್ಮ ಸಿಬ್ಬಂದಿಯೊಂದಿಗೆ ಕನ್ಯಾನ ಗ್ರಾಮದ ಬೈರಿಕಟ್ಟೆ ಎಂಬಲ್ಲಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಮರಳು ಲೋಡ್ ಮಾಡಿರುವುದು ಪತ್ತೆಯಾಗಿದೆ.
ವಿಚಾರಣೆ ವೇಳೆ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಮರಳು ಸಾಗಿಸುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮರಳು ಸಹಿತ ಪಿಕ್‌ಅಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




