ಉಡುಪಿ: ಸಂತೆಕಟ್ಟೆಯ ಮಧುವನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ್ ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಉತ್ತರಾಖಂಡ್ ರಾಜ್ಯ ಮೂಲದ ಅನಿಲ್ ಸಿಂಗ್(31) ಎಂದು ಗುರುತಿಸಲಾಗಿದೆ. ಇವರು ಕಳೆದ 2022ರಿಂದ ಸಂತೆಕಟ್ಟೆಯ ಮಧುವನ ಬಾರ್‌ನಲ್ಲಿ ತಂದೂರಿ ಕುಕ್ ಆಗಿ ಕೆಲಸ ಮಾಡುತ್ತಿದ್ದರು.
ಈ ಕುರಿತು ಪಿರ್ಯಾದಿದಾರರಾದ ಹೆಬ್ರಿ ತಾಲೂಕಿನ ದುಳ್ಳಿ ಸೋಮೇಶ್ವರ ಅಂಚೆಯ ಪ್ರಕೃತಿ ನಿಲಯ ನಿವಾಸಿ ಪ್ರಭಾಕರ ಪೂಜಾರಿ(52) ಅವರು ನೀಡಿದ ದೂರಿನ ಪ್ರಕಾರ, ಮೇ 15ರಂದು ರಾತ್ರಿ 11.15ರವರೆಗೆ ಅನಿಲ್ ಸಿಂಗ್ ಬಾರ್‌ನಲ್ಲಿ ಕೆಲಸ ಮಾಡಿದ್ದು, ಬಳಿಕ ಬಾರ್ ಹಿಂಭಾಗದ ಬಾವಿ ಕಟ್ಟೆಯ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಪಿರ್ಯಾದಿದಾರರು ಕೆಲಸ ಮುಗಿಸಿ ತಮ್ಮ ರೂಮಿಗೆ ತೆರಳಿ ಮಲಗಿದ್ದು, ರಾತ್ರಿ ಸುಮಾರು 1.30ರ ವೇಳೆಗೆ ಬಾರ್ ಹೊರಭಾಗದಲ್ಲಿ ಮೊಬೈಲ್ ನಿರಂತರವಾಗಿ ರಿಂಗ್ ಆಗುತ್ತಿದ್ದುದನ್ನು ಸಿಬ್ಬಂದಿ ಜಯ ಪೂಜಾರಿ ಗಮನಿಸಿದ್ದಾರೆ. ಅವರು ಜನರೇಟರ್ ರೂಮಿನ ಬಳಿ ತೆರಳಿ ನೋಡಿದಾಗ ಅನಿಲ್ ಸಿಂಗ್ ಅವರು ಜನರೇಟರ್ ರೂಮಿನ ಹೊಗೆ ಹೊರಹೋಗುವ ಪೈಪಿಗೆ ನೈಲಾನ್ ಹಗ್ಗ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣ ಈ ವಿಷಯವನ್ನು ಪ್ರಭಾಕರ ಪೂಜಾರಿಗೆ ತಿಳಿಸಲಾಗಿದ್ದು, ಬಳಿಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಲಾಗಿದೆ. ನಂತರ ಅನಿಲ್ ಸಿಂಗ್ ಅವರನ್ನು ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




