Home Karkala News ಟ್ರೇಡಿಂಗ್ ಹೆಸರಲ್ಲಿ ₹29.42 ಲಕ್ಷ ವಂಚನೆ; ಹೆಬ್ರಿಯಲ್ಲಿ ಪ್ರಕರಣ ದಾಖಲು

ಟ್ರೇಡಿಂಗ್ ಹೆಸರಲ್ಲಿ ₹29.42 ಲಕ್ಷ ವಂಚನೆ; ಹೆಬ್ರಿಯಲ್ಲಿ ಪ್ರಕರಣ ದಾಖಲು

ಹೆಬ್ರಿ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಸುಮಾರು ₹29.42 ಲಕ್ಷ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶೋಭಾ ಅವರಿಗೆ ದಿನಾಂಕ 13/01/2026 ರಂದು ಫೇಸ್‌ಬುಕ್‌ನಲ್ಲಿ “₹21,000 ಹೂಡಿಕೆ ಮಾಡಿದರೆ ತಿಂಗಳಿಗೆ ₹28,000 ಆದಾಯ” ಎಂಬ ಜಾಹೀರಾತು ಕಾಣಿಸಿಕೊಂಡಿತ್ತು. ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದಾಗ, ತಾವು “9 ಪ್ರೋ ಟ್ರೆಡಿಂಗ್ ಕಂಪೆನಿ”ಯವರಾಗಿದ್ದಾಗಿ ಹೇಳಿದ ಆರೋಪಿತರು, ಮೊದಲು ₹21,000 ಹಣ ಹೂಡಿಕೆ ಮಾಡಲು ಸೂಚಿಸಿದ್ದರು. ಅದರಂತೆ ಪಿರ್ಯಾದಿದಾರರು ಗೂಗಲ್ ಪೇ ಮೂಲಕ ಆರೋಪಿತರು ಕಳುಹಿಸಿದ ಸ್ಕ್ಯಾನರ್‌ಗೆ ಹಣ ವರ್ಗಾವಣೆ ಮಾಡಿದ್ದರು.

ನಂತರ “ಜೀತೇಶ್ ಕುಮಾರ್” ಎಂಬಾತ ಪೈನಾನ್ಸ್ ಅಡ್ವೈಸರ್ ಎಂದು ಪರಿಚಯಿಸಿಕೊಂಡು ಟ್ರೇಡಿಂಗ್ ಮಾಡಿಸಿ ಎರಡು ದಿನಗಳಲ್ಲಿ ₹1,200 ಲಾಭ ಬಂದಿರುವುದಾಗಿ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾನೆ. ಬಳಿಕ ಪಿರ್ಯಾದಿದಾರರು ಸುಮಾರು ₹10 ರಿಂದ ₹15 ಲಕ್ಷ ಸಾಲದಲ್ಲಿರುವುದಾಗಿ ತಿಳಿಸಿದಾಗ, ಚಿನ್ನದ ಮೇಲೆ ₹10 ಲಕ್ಷ ಹೂಡಿಕೆ ಮಾಡಿದರೆ ಒಂದು ತಿಂಗಳಲ್ಲಿ ಸಾಲ ತೀರಿಸುವಷ್ಟು ಲಾಭ ಸಿಗುತ್ತದೆ ಎಂದು ನಂಬಿಕೆ ಮೂಡಿಸಿದ್ದಾರೆ ಎನ್ನಲಾಗಿದೆ.

ಆರೋಪಿತರಾದ ಜೀತೇಶ್ ಕುಮಾರ್, ವೀರ್ ರಾವುತ್ ಹಾಗೂ ಇತರರ ಸೂಚನೆಯಂತೆ  ತಮ್ಮ ಚಿನ್ನವನ್ನು ಅಡವಿಟ್ಟು, ದಿನಾಂಕ 21/01/2026ರಿಂದ 09/05/2026ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಒಟ್ಟು ₹29,42,940 ಹಣ ವರ್ಗಾವಣೆ ಮಾಡಿದ್ದು, ಬಳಿಕ ಹಣ ವಾಪಸು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.