ಉಡುಪಿ : ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಕಿನ್ನಿಮುಲ್ಕಿ ಜೆಎಇ’ಸ್ ವೀಲ್ ಅಲೈನ್‌ಮೆಂಟ್ ಎದುರಿನ ಬಲಾಯಿಪಾದೆ–ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನ ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ KA-20 HB-8109 ಸಂಖ್ಯೆಯ ಬೈಕ್‌ನಲ್ಲಿ ಆರೋಪಿ ರಜತ್ ಆಚಾರ್ಯ ಎಂಬಾತನು ತನ್ನ ತಾಯಿ ಭಾಗೀರಥಿ (53) ಅವರನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ದುಡುಕು ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಭಾಗೀರಥಿ ಅವರ ಹಿಂಬದಿ ತಲೆಗೆ ಗಂಭೀರ ಸ್ವರೂಪದ ಜಖಂ ಉಂಟಾಗಿದೆ.
ಗಾಯಾಳು ಭಾಗೀರಥಿ ಅವರನ್ನು ತಕ್ಷಣ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ಸಂಜೆ 5.40ರ ವೇಳೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಸಂಬಂಧ ಅಜಿತ್ (38), ತಂದೆ ದಿ. ರಾಮ, ಪಾಳೆಕಟ್ಟೆ, ಕೊಡವೂರು ನಿವಾಸಿ ನೀಡಿದ ದೂರಿನ ಮೇರೆಗೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026 ಅಡಿಯಲ್ಲಿ ಕಲಂ 281 ಮತ್ತು 106(1) BNS ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



