Home Dskshina Kannada ಕಡಬ: ಅಕ್ರಮ ಮರಳು ಸಾಗಾಟಕ್ಕೆ ಯತ್ನ; ಪಿಕಪ್ ಸಹಿತ ಮೂವರು ಪೊಲೀಸ್ ವಶಕ್ಕೆ

ಕಡಬ: ಅಕ್ರಮ ಮರಳು ಸಾಗಾಟಕ್ಕೆ ಯತ್ನ; ಪಿಕಪ್ ಸಹಿತ ಮೂವರು ಪೊಲೀಸ್ ವಶಕ್ಕೆ

ಕಡಬ: ತಾಲೂಕಿನ ಬಲ್ಯ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ತಂಡವೊಂದನ್ನು ಕಡಬ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

 

ನಾರಾಯಣ (54),ಪ್ರಸನ್ನ (33), ಗಿರೀಶ್ (41) ಬಂಧಿತರು ಎಂದು ತಿಳಿದು ಬಂದಿದೆ.

 

ಮರಳು ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

 

ಎ.26 ರಂದು ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಅವರು ಸಿಬ್ಬಂದಿಗಳೊಂದಿಗೆ ತನಿಖೆಗಾಗಿ ಬಲ್ಯ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಹೊಸ್ಮಠ ಎಂಬಲ್ಲಿ ಅಕ್ರಮ ಮರಳುಗಾರಿಕೆಯ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಕೊಲ್ಯದಕಟ್ಟದ ಗುಂಡ್ಯ ಹೊಳೆಯ ದಡಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ದಾಳಿ ನಡೆದಿದಾಗ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಈ ಸ್ಥಳದಲ್ಲಿ ಅಕ್ರಮವಾಗಿ ಮರಳನ್ನು ರಾಶಿ ಹಾಕಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಮೂವರು ವ್ಯಕ್ತಿಗಳನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ.

 

ದಾಳಿ ಸಂದರ್ಭ ಒಂದು ಪಿಕ್‌ಅಪ್ ಲೋಡ್ ಮರಳು, ಬೊಲೆರೊ ಪಿಕಪ್ ವಾಹನ, ಮರಳು ತೆಗೆಯಲು ಬಳಸುತ್ತಿದ್ದ ಕಬ್ಬಿಣ ಹಾಗೂ ಕಟ್ಟಿಗೆ ಹಿಡಿಯ ಸಲಾಕೆಗಳು ಮತ್ತು ಪ್ಲಾಸ್ಟಿಕ್ ಬುಟ್ಟಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.