Home Crime ಲೋಕಾಯುಕ್ತ ದಾಳಿ : ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ಮನೆಯಲ್ಲಿ 26.55 ಕೋಟಿ ರೂ. ಅಕ್ರಮ...

ಲೋಕಾಯುಕ್ತ ದಾಳಿ : ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ಮನೆಯಲ್ಲಿ 26.55 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ…!!

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಿಯೋಜನೆ ಮೇರೆಗೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಎನ್‌. ತೇಜಸ್‌ ಕುಮಾರ್‌ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ದಾಳಿ ವೇಳೆ 26.65 ಕೋಟಿ ಮೊತ್ತದ ಅಕ್ರಮ ಆಸ್ತಿ ಪತ್ತೆ ಮಾಡಿದೆ.

ತೇಜಸ್‌ ಅವರು ಈಗ ಅರಣ್ಯ ಇಲಾಖೆಯ ಶಿವಮೊಗ್ಗ ವಿಭಾಗದ ಮ್ಯಾನೇಜರ್‌ ಹುದ್ದೆಗೆ ವರ್ಗಾವಣೆಯಾಗಿದ್ದು, ಇನ್ನಷ್ಟೇ ವರದಿ ಮಾಡಿಕೊಳ್ಳಬೇಕಿದೆ.

ಈ ನಡುವೆ ತೇಜಸ್‌ ಅವರು ತಮ್ಮ ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಬೆಂಗಳೂರು ನಗರ–1 ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ಬೆನ್ನಲ್ಲೇ ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್‌ ಸಿಬ್ಬಂದಿ ಗುರುವಾರ ಐದು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ 26.65 ರೂ. ಕೋಟಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. 14 ಎಕರೆ ಕೃಷಿ ಜಮೀನು, 8 ಮನೆಗಳು, 4 ನಿವೇಶನಗಳು ಸೇರಿ ಒಟ್ಟು 25.63 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 92 ಲಕ್ಷ ರೂ. ಮೌಲ್ಯದ ವಾಹನಗಳನ್ನು ಹೊಂದಿದ್ದಾರೆಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಅಧಿಕಾರಿ ಮತ್ತು ಸಂಬಂಧಿಗಳ ಮನೆಯಲ್ಲಿ ಶೋಧದ ವೇಳೆ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಪತ್ತೆಯಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.