ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ ಮೂಲದ ಎಂಟು ಮಂದಿ ಅಂತರ್‌ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ ಜಾತ್ರೆಯನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಲು ಈ ತಂಡ ಹೊಂಚು ಹಾಕಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಫೆಬ್ರವರಿ 25ರಂದು ಮುಂಜಾನೆ 5:30ರ ಸುಮಾರಿಗೆ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಕೆ. ಮಿಲನ್ ಹೋಟೆಲ್ ಬಳಿ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಸುತ್ತುವರೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತರು ಮಹಾರಾಷ್ಟ್ರದ ಪುಣೆ ಮತ್ತು ಥಾಣೆ ಮೂಲದವರಾಗಿದ್ದು, ಉಮೇಶ ರಾಮಾ ಗಾಯಕವಾಡ (35), ಲಖನ್ ಸುಹಾಸ್ ಜಾದವ (30), ಪ್ರಶಾಂತ ಅಖಿಲ್ ಪವಾರ (35), ಶ್ರೀನಾಥ ಶಂಕರ ಜಾದವ (39), ದೀಪಕ ಚಂದರಲಾಲ್ ದುಂಬಾನಿ (47), ಸುಂದರ ಕೈಲಾಸ್ ಗಾಯಕವಾಡ (50), ನಾಗುಬಾಯಿ ಗಣೇಶ ಜಾದವ (60) ಮತ್ತು ಅಂಬಿಕಾ ಪ್ರಕಾಶ ಜಾದವ (39) ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಕೈಕಡಿ ಸಮುದಾಯಕ್ಕೆ ಸೇರಿದ ಈ ತಂಡ ಕಳೆದ 3-4 ವರ್ಷಗಳಿಂದ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು, ಪ್ರವಾಸಿ ತಾಣಗಳು ಮತ್ತು ಜಾತ್ರೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿತ್ತು. ಜನಸಂದಣಿ ಪ್ರದೇಶಗಳಲ್ಲಿ ಪಿಕ್‌ಪಾಕೆಟ್, ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಬಳೆ ಕಳ್ಳತನ ಮಾಡುವುದರಲ್ಲಿ ಇವರು ನಿಪುಣರು. ಕೃತ್ಯ ಎಸಗಿ ತಮ್ಮದೇ ವಾಹನದಲ್ಲಿ ಪರಾರಿಯಾಗುತ್ತಿದ್ದರು.
ಸಾರ್ವಜನಿಕರು ಹಿಡಿಯಲು ಯತ್ನಿಸಿದರೆ ಕಲ್ಲಿನಿಂದ ಹಲ್ಲೆ ನಡೆಸುವ ಕ್ರೂರ ಸ್ವಭಾವ ಹೊಂದಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಈ ಹಿಂದೆಯೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಹಾಗೂ ಮುರ್ಡೇಶ್ವರದಲ್ಲಿ ಕಳ್ಳತನ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.



