ಮಹಾಮಸ್ತಕಾಭಿಷೇಕವನ್ನು ಯಶಸ್ವೀಗೊಳಿಸುವಲ್ಲಿ ಸಮಾಜದ ಸಹಕಾರ ಅತ್ಯಗತ್ಯ- ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು
ಕಾರ್ಕಳ: ಪಂಚಾಮೃತಗಳಿಂದ ದೇವರನ್ನು ಅಭಿಷೇಕ ಮಾಡುವುದರಿಂದ ಜ್ಞಾನದಿಂದಲೋ ಅಥವಾ ಅಜ್ಞಾನದಿಂದಲೋ ಮಾಡಿರುವ ನಮ್ಮ ದೋಷಗಳು ನಿವಾರಣೆಯಾಗುತ್ತವೆ. ಅಭಿಷೇಕವು ದೇವರಿಗೆ ತೃಪ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಭಕ್ತನ ಪಾಪಗಳನ್ನು ಕಳೆದು ಮನಸ್ಸನ್ನು ಶಾಂತಗೊಳಿಸುವ ಮತ್ತು ದೋಷಗಳನ್ನು ನಿವಾರಿಸುವ ಒಂದು ಪವಿತ್ರ ಕ್ರಿಯೆಯಾಗಿದೆ ಎಂದು ಕಾರ್ಕಳ ಜೈನ ಮಠದ ಪರಮಪೂಜ್ಯ ‘ರಾಜಗುರು’ ‘ಧ್ಯಾನಯೋಗಿ’ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿದರು. ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾನುವಾರ ನಡೆದ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿಯವರು, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವನ್ನು ಯಶಸ್ವೀಗೊಳಿಸುವಲ್ಲಿ ಸಮಾಜದ ಸಹಕಾರ ಅತ್ಯಗತ್ಯ. ಮಹಾಮಸ್ತಕಾಭಿಷೇಕದ ಯಶಸ್ವೀಗೆ ಎಲ್ಲರೂ ಒಂದೇ ಮನಸ್ಸಿನಿಂದ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷ ಹಾಗೂ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಬೆಳೆದಂತೆ ಮತ್ತೊಬ್ಬರನ್ನು ಬೆಳೆಸುವ ಮನೋಭಾವ ನಮ್ಮಲ್ಲಿರಬೇಕು. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಶ್ರೀ ಭಗವಾನ್ ಬಾಹುಬಲಿಯ ನಾಲ್ಕು ಮಸ್ತಕಾಭಿಷೇಕದಲ್ಲಿ ಸೇವೆ ಮಾಡುವ ಅವಕಾಶ ನನಗೆ ದೊರಕ್ಕಿದ್ದು, ಮುಂದಿನ ವರ್ಷ ಫೆ. 18ರಿಂದ 28ರವರೆಗೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ತಾವೆಲ್ಲರೂ ಕೈಜೋಡಿಸಬೇಕು ಎಂದು ಕೋರಿದರು ಹಾಗೂ ಎಲ್ಲಾ ಸರಕಾರಿ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಡಾ. ಎಂ ಎನ್ ರಾಜೇಂದ್ರ ಕುಮಾರ್ ಮತ್ತು ಸಮಿತಿಯ ಉಪಾಧ್ಯಕ್ಷರಾದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಡಿಜಿಟಲೀಕರಣದ ಮೂಲಕ ಮಹಾಮಸ್ತಕಾಭಿಷೇಕದ ದಿನಾಂಕವನ್ನು ಘೋಷಣೆ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಗವಾನ್ ಬಾಹುಬಲಿ ತ್ಯಾಗ, ಅಹಿಂಸೆಯ ಪ್ರತೀಕ. ಶಾಂತಿಯ ಪ್ರತಿಬಿಂಬ. ಸಮಾಜದಲ್ಲಿ ಎಷ್ಟೇ ಜಾತಿ, ಧರ್ಮಗಳು ಇರಬಹುದು, ಅದೆಲ್ಲಕ್ಕಿಂತ ಮಿಗಿಲಾಗಿ ನಾವೆಲ್ಲ ಮನುಕುಲಕ್ಕೆ ಸೇರಿದವರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಆಳ್ವ, ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ. ಕೆ., ಮಾಜಿ ಸಚಿವ ಅಭಯಚಂದ್ರ ಜೈನ್, ಉದಯ ಕುಮಾರ್ ಶೆಟ್ಟಿ ಮುನಿಯಾಲು ಸಾಂದರ್ಭಿಕವಾಗಿ ಮಾತನಾಡಿದರು.
ಡಾ. ಪದ್ಮಪ್ರಸಾದ ಅಜಿಲರು, ಡಾ. ಮೋಹನ್ ಆಳ್ವ, ಡಾ. ಕೆ. ಜೀವಂಧರ ಬಳ್ಳಾಲ್, ಪಡುಬಿದ್ರಿ ರತ್ನಾಕರರಾಜ್ ಅರಸರು, ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಡಿವೈಎಸ್ಪಿ ವಿಜಯ ಪ್ರಸಾದ್, ದೇವಿ ಪ್ರಸಾದ್ ಶೆಟ್ಟಿ, ಶಶಿಕುಮಾರ್ ರೈ, ಸುಧೀರ್ ಪಡಿವಾಳ್, ಜಗದೀಶ ಅಧಿಕಾರಿ, ಗುಣಪಾಲ ಕಡಂಬು ಶಿರ್ಲಾಲು, ಮಹಾವೀರ ಹೆಗ್ಡೆ ಅಂಡಾರು, ಅನಂತರಾಜ ಪೂವಣಿ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಮೋಹನ್ ಪಡಿವಾಳ್ ವಂದಿಸಿದರು. ಅಜಿತ್ ಜೈನ್ ಕೊಕ್ರಾಡಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆಯನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನೆರವೇರಿಸಿದರು.






