ಉಡುಪಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಉಡುಪಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಸಹಭಾಗಿತ್ವದಲ್ಲಿ ಸುಮಾರು 2.5ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಒಟ್ಟು 207 ಜಂಕ್ಷನ್‌ಗಳಲ್ಲಿ 601 ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಕಲಹದ ಸ್ಥಳಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಳ, ಹೊಸ್ಮಾರು, ಸಚ್ಚರಿಪೇಟೆ, ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಸಾಣೂರು, ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೆಶ್ವರ, ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿ, ಕೊಲ್ಲೂರು ಠಾಣಾ ವ್ಯಾಪ್ತಿಯ ದಳಿ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮೇಲ್ ಗಂಗೊಳ್ಳಿ, ಮಲ್ಪೆ ಠಾಣಾ ವ್ಯಾಪ್ತಿಯ ಮಲ್ಪೆ ಬೀಚ್ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣಗಳಲ್ಲಿ ಒಟ್ಟು 10 ಎ.ಎನ್.ಪಿ.ಆರ್.(ಅಟೋಮೆಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್, ಕರಾವಳಿ ಜಂಕ್ಷನ್, ಇಂದ್ರಾಳಿ ಬ್ರಿಡ್ಜ್, ಸಂತೆಕಟ್ಟೆ ಜಂಕ್ಷನ್, ಸರ್ವಿಸ್ ಬಸ್ ನಿಲ್ದಾಣ ಮತ್ತು ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಎಂ ಕೋಡಿ ಜಂಕ್ಷನ್ ಮತ್ತು ಕಂಡ್ಲೂರು ಪೇಟೆ ಹಾಗೂ ಕಾರ್ಕಳ ಉಪವಿಭಾಗ ವ್ಯಾಪ್ತಿಯ ಬಾರಾಡಿ ಮತ್ತು ನಾರಾವಿ ಸ್ಥಳಗಳಲ್ಲಿ ಒಟ್ಟು 10 ಉತ್ತಮ ಗುಣಮಟ್ಟದ ಕೆಮರಾಗಳನ್ನು ಅಳವಡಿಸಲಾಗುವುದು. ಈ ಎಲ್ಲಾ ಕ್ಯಾಮೆರಾಗಳ ವೀಕ್ಷಣೆಯನ್ನು ಸ್ಥಳೀಯ ಸಂಬಂಧಪಟ್ಟ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಕಾರ್ಯದರ್ಶಿ ಡಾ.ವಿಜಯೇಂದ್ರ, ಹೆಚ್ಚುವರಿ ಎಸ್ಪಿ ಸುಧಾಕರ್ ಎಸ್.ನಾಯ್ಕ್ ಉಪಸ್ಥಿತರಿದ್ದರು.