Home Crime ಕಾರು-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ, 6 ಮಂದಿ ಸಜೀವ ದಹನ : ಬಸ್‌ನಲ್ಲಿದ್ದ ಹಲವರಿಗೆ ಗಂಭೀರ...

ಕಾರು-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ, 6 ಮಂದಿ ಸಜೀವ ದಹನ : ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯ

ಯಾದಗಿರಿ : ಖಾಸಗಿ ಸ್ಲೀಪರ್ ಬಸ್ ಹಾಗೂ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯ ಬಳಿಕ ಉಂಟಾದ ಬೆಂಕಿ ಆಕಸ್ಮಿಕಕ್ಕೆ ಆರು ಮಂದಿ ಸಜೀವ ದಹನವಾಗಿದ್ದಾರೆ.

ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಲಿಂಗಸುಗೂರಿನಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯಾದ ತಕ್ಷಣವೇ ಎರಡೂ ವಾಹನಗಳಿಗೆ ಬೆಂಕಿ ಆವರಿಸಿಕೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲಾಗದೆ ವಾಹನದ ಒಳಗಡೆಯೇ ಸಿಲುಕಿಕೊಂಡಿದ್ದರು.

ಕಾರಿನಲ್ಲಿದ್ದ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇನ್ನೊಂದೆಡೆ ಬಸ್ಸಿಗೆ ಬೆಂಕಿ ಹತ್ತಿಕೊಂಡ ತಕ್ಷಣವೇ ಎಚ್ಚೆತ್ತ ಪ್ರಯಾಣಿಕರು ತುರ್ತು ಕಿಟಕಿ ಹಾಗೂ ಬಾಗಿಲುಗಳ ಮೂಲಕ ಹೊರಕ್ಕೆ ಜಿಗಿದಿದ್ದಾರೆ. ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.