Home Latest ಅಪ್ರಾಪ್ತ ಬಾಲಕಿಯರು ಹಾಗೂ ಇರ್ವರು‌ ಮಹಿಳೆಯರ ರಕ್ಷಣೆ…!!

ಅಪ್ರಾಪ್ತ ಬಾಲಕಿಯರು ಹಾಗೂ ಇರ್ವರು‌ ಮಹಿಳೆಯರ ರಕ್ಷಣೆ…!!

ಕಾಪು,ಏ.4: ಜಿಲ್ಲಾ ಮಕ್ಕಳ ರಕ್ಷಣಾ ಘಟಕ‌ ಹಾಗೂ ಜಿಲ್ಲಾ ಅಕ್ಕಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಟಪಾಡಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಇರ್ವರು ಅಪ್ರಾಪ್ತ ಪ್ರಾಯದ ಹೆಣ್ಣು ಮಕ್ಕಳು ಹಾಗೂ ಇರ್ವರು ಮಹಿಳೆಯರನ್ನು ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಜೂಹಿ ದಾಮೋದರ, ಸದಸ್ಯರಾದ ಮಿತ್ರಕುಮಾರ್, ಅನಿತಾ, ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

3 ಮತ್ತು 10 ವರ್ಷದ ಬಾಲಕಿಯರು ಹಾಗೂ ಮಕ್ಕಳ ತಾಯಿ, ದೊಡ್ಡಮ್ಮ ಒಟ್ಟು ನಾಲ್ವರು ಕಟಪಾಡಿ ಬಸ್ಸು ನಿಲ್ದಾಣದಲ್ಲಿ ದಿನಗಳನ್ನು ಕಳೆಯುತ್ತಿದ್ದರು. ಅನಾಗರಿಕ ಬದುಕನ್ನು ಗಮನಿಸಿದ ಸಾರ್ವಜನಿಕರು, ಸಂಬಂಧಪಟ್ಟವರಿಗೆ ದೂರು ನೀಡಿದ್ದರು. ತಕ್ಷಣ ಸ್ಪಂದಿಸಿದ ಇಲಾಖೆಯ ಘಟಕಗಳಿಂದ ನಾಲ್ವರ ರಕ್ಷಣಾ ಕಾರ್ಯಚರಣೆ ನಡೆಯಿತು. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.

ಕಲ್ಯಾಣ ಸಮಿತಿಯ ಆದೇಶಾನುಸಾರ ಮಕ್ಕಳ‌ ಆರೋಗ್ಯ ಸ್ಥಿತಿ ತಪಾಸಣೆ ನಡೆಸಬೇಕಾಯಿತು. ಕೂಸಮ್ಮ ಶಂಭು‌ ಶೆಟ್ಟಿ,- ಹಾಜೀ ಅಬ್ದುಲ್ಲಾ ತಾಯಿ‌ ಮತ್ತು‌‌ ಮಕ್ಕಳ ಆಸ್ಪತ್ರೆಗೆ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರ ನೆರವಿನಿಂದ ದಾಖಲುಪಡಿಸಲಾಯಿತು. ಮಕ್ಕಳ ದೊಡ್ಡಮ್ಮಳಿಗೆ ಕ್ಷಯರೋಗ ಲಕ್ಷಣಗಳು ಕಂಡುಬಂದಿರುವುದರಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಒಳಕಾಡುವರು ದಾಖಲುಪಡಿಸಿದರು. ಆಸ್ಪತ್ರೆಯ ವೈದ್ಯರ ತಪಾಸಣಾ ವರದಿಯ ಬಳಿಕ ಮಕ್ಕಳಿಗೆ ಚಿಕಿತ್ಸೆ ಪುರ್ನವಸತಿ, ಅಥವಾ ವಾರಸುದಾರರಿಗೆ ಒಪ್ಪಿಸುವ ಕಾನೂನು ಪ್ರಕ್ರಿಯೆಗಳು ಇಲಾಖೆಯಿಂದ ಮುಂದಿನ ಹಂತದಲ್ಲಿ ನಡೆಯಲಿದೆ.