ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ನಡೆಯುತ್ತಿದ್ದ ಮಟ್ಕಾ ಜುಗಾರಿ ಅಡ್ಡೆಯ ಮೇಲೆ ಕೋಟ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನಗದು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್ ಜಾಬಗೌಡ ಅವರಿಗೆ ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆ ಗಣೇಶ ಕಾಂಪ್ಲೆಕ್ಸ್ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಖಚಿತ ಮಾಹಿತಿ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಅವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದರು. ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ಗಮನಿಸಿದಾಗ, ಸಾರ್ವಜನಿಕರ ಗುಂಪು ಸೇರಿರುವುದು ಕಂಡುಬಂದಿದೆ. ಆಮಿಷ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಮಧ್ಯಾಹ್ನ ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ, ಸ್ಥಳದಲ್ಲಿದ್ದ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಈ ವೇಳೆ ಮಟ್ಕಾ ಚೀಟಿ ಬರೆಯುತ್ತಿದ್ದ ನಿರಂಜನ ಎಂಬಾತನನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ತಾನು ರಘು ಹೆಸ್ಕುತ್ತೂರು ಎಂಬುವವರ ಸೂಚನೆಯಂತೆ ಈ ಮಟ್ಕಾ ಆಟ ಆಡಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಜನರಿಂದ ಸಂಗ್ರಹವಾದ ಹಣವನ್ನು ರಘು ಅವರಿಗೆ ನೀಡುತ್ತಿದ್ದು, ಅದಕ್ಕೆ ಪ್ರತಿಯಾಗಿ ತನಗೆ ಕಮಿಷನ್ ಸಿಗುತ್ತಿತ್ತು ಎಂದು ಆತ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





