ಉಳ್ಳಾಲ : ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಬೇರ್ಪಟ್ಟ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ನೇರವಾಗಿ ತಲೆಗೆ ಬಿದ್ದ ಪರಿಣಾಮ ಶಿವಮೊಗ್ಗ ಮೂಲದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ನಿವಾಸಿ ಶಿವಕುಮಾರ್ ಜಿ.ಕೆ (30) ಮೃತಪಟ್ಟ ದುರ್ದೈವಿ. ಶುಕ್ರವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ.
ಕುತ್ತಾರು ಸಲಾತ್ ನಗರದ ಖಾಲಿ ಸೈಟೊಂದರಲ್ಲಿ ಹೊಸ ಬಾವಿ ಅಗೆಯುವ ಕೆಲಸ ನಡೆಯುತ್ತಿತ್ತು. ಆರು ಮಂದಿ ಕಾರ್ಮಿಕರ ಪೈಕಿ ಶಿವಕುಮಾರ್ ಸೇರಿದಂತೆ ಮೂವರು ಸುಮಾರು 30 ಅಡಿ ಆಳದ ಬಾವಿಯೊಳಗೆ ಕೆಲಸ ಮಾಡುತ್ತಿದ್ದರು. ಕ್ರೇನ್ ಮೂಲಕ ಬಕೆಟ್‌ನಲ್ಲಿ ಮಣ್ಣನ್ನು ಮೇಲೆ ಎತ್ತುತ್ತಿದ್ದಾಗ, ಇದ್ದಕ್ಕಿದ್ದಂತೆ ಕ್ರೇನ್‌ನ ಕೊಕ್ಕೆಯಿಂದ ಬಕೆಟ್ ಬೇರ್ಪಟ್ಟು ಕೆಳಗೆ ಬಿದ್ದಿದೆ.
ಮಣ್ಣು ತುಂಬಿದ ಭಾರೀ ಗಾತ್ರದ ಈ ಕಬ್ಬಿಣದ ಬಕೆಟ್ ನೇರವಾಗಿ ಶಿವಕುಮಾರ್ ಅವರ ತಲೆಗೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಬಾವಿಯಲ್ಲಿದ್ದ ಇತರ ಇಬ್ಬರು ಕಾರ್ಮಿಕರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಶಿವಕುಮಾರ್ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ತೊಕ್ಕೊಟ್ಟಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಿಶೇಷವೆಂದರೆ, ಕೇವಲ ಎರಡು ವಾರಗಳ ಹಿಂದಷ್ಟೇ ಅವರು ತಮ್ಮ ಕಿರಿಯ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದರು.
ಘಟನೆಗೆ ಮುನ್ನಾದಿನವಷ್ಟೇ ಪತ್ನಿ-ಮಕ್ಕಳನ್ನು ಊರಿಗೆ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





