ಉಡುಪಿ: ಮಲ್ಪೆಯಿಂದ ಆಗುಂಬೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ನಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಯ ಕುರಿತಂತೆ ಸ್ವತಃ ತಾನು ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಪ್ರಗತಿಯನ್ನು ಅವಲೋಕಿಸುತಿದ್ದೇನೆ. ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಗಿಸುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದ್ರಾಳಿಯ ಮೇಲ್ಲೇತುವೆ ಬಗ್ಗೆ ನಿರಂತರ ಪ್ರತಿಭಟನೆ, ವಿವಿಧ ರೀತಿಯ ಅಣಕಗಳ ನಡುವೆ ಇಲಾಖೆಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಹತ್ತಾರು ಬಾರಿ ಸ್ಥಳದಲ್ಲೇ ನಿಂತು ಕಾಮಗಾರಿಗೆ ವೇಗ ಕೊಟ್ಟಿದ್ದೆ ಎಂದಿರುವ ಸಂಸದರು, ಸಂಬಂಧಿತ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಎಫ್‌ಐಆರ್ ದಾಖಲಿಸಿ ಗರ್ಡರ್ ಕಾಮಗಾರಿಗೆ ಅವಧಿ ನಿಗದಿ ಪಡಿಸಿದ್ದು ಸರಕಾರಿ ವ್ಯವಸ್ಥೆಯಲ್ಲೇ ಪ್ರಥಮ ಎಂದಿದ್ದಾರೆ. ಇಂದೂ ಸಹ ಇಂದ್ರಾಳಿಗೆ ಭೇಟಿ ಕೊಟ್ಟು ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಕಾಂಕ್ರೀಟೀಕರಣ ಬೇಗ ಮುಗಿಸಲು ಆಗ್ರಹಿಸಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆಸುವ ಎಲ್ಲ ಪ್ರತಿಭಟನೆಯನ್ನು ಗೌರವಿಸಿ, ವಿರೋಧಿಸುವವರು ಮೆಚ್ಚುವಂತೆ ಕಾಮಗಾರಿಯನ್ನು ಮುಗಿಸುವುದು ನನ್ನ ಗುರಿಯಾಗಿದೆ ಎಂದಿದ್ದಾರೆ.
ಮಲ್ಪೆ-ಆದಿಉಡುಪಿ ಭಾಗದಲ್ಲಿ ಸುಮಾರು ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು, 135 ಭೂಮಾಲಕರಿಗೆ ಸುಮಾರು 24.86 ಕೋಟಿ ರೂ. ಪರಿಹಾರ ಹಣ ಪಾವತಿಯಾಗಿದೆ. ತಕರಾರು ಇರುವಲ್ಲಿ ನಾನೇ ಅಧಿಕಾರಿಗಳೊಂದಿಗೆ ಹಲವು ಬಾರಿ ಭೇಟಿ ಕೊಟ್ಟು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಿದ್ದೆ.ಇಲ್ಲಿಯವರೆಗೆ ದಾಖಲೆಗಳನ್ನೇ ನೀಡದ 70 ಭೂಮಾಲಕರನ್ನು ಸಂಪರ್ಕಿಸಿ ಕೋರ್ಟ್ ಮೂಲಕ ಠೇವಣಿ ಇರಿಸಿ ಕಾಮಗಾರಿ ಮುನ್ನಡೆಸಲು ಪ್ರಯತ್ನಿಸಲಾಗಿದೆ. ಇದೀಗ ಮಲ್ಪೆ- ಕರಾವಳಿ ಜಂಕ್ಷನ್ ಕಾಮಗಾರಿ ಮತ್ತು ಭೂಪರಿಹಾರದ ಚಟುವಟಿಕೆ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪರ್ಕಳದ ಕಾಮಗಾರಿಯ ಕುರಿತು ವಿವರಿಸಿದ ಅವರು ಪರ್ಕಳದ ತಿರುವು ನೇರಗೊಳಿಸಿ ಕಾಮಗಾರಿ ನಡೆಯುತ್ತಿರುವಾಗ 11 ಮಂದಿ ಭೂಮಾಲಕರು ರಾಜ್ಯದ ಉಚ್ಚ ನ್ಯಾಯಾಲಯದಿಂದ ಎರಡು-ಮೂರು ಬಾರಿ ತಡೆಯಾಜ್ಞೆ ತಂದಿರುತ್ತಾರೆ. ಇದೀಗ ಸದ್ಯದಲ್ಲಿ ತಡೆಯಾಜ್ಞೆ ತೆರವಾಗುತ್ತದೆ ಎಂಬ ನಂಬಿಕೆಯಿದೆ.
ಕಲ್ಯಾಣಪುರದ ಅಂಡರಪಾಸ್ ಬಗ್ಗೆ ರಾಜಕೀಯ ಕಾರಣಗಳಿಗಾಗಿ ಟೀಕಿಸುವವರು ಇದೀಗ ರಸ್ತೆ ಸಂಚಾರ ಸುಗಮವಾಗಿದ್ದು ಎರಡೂ ಕಡೆಯ ಮೇಲ್ಲೇತುವೆ ಡಾಂಬರೀಕರಣವಾಗಿ ಸರಾಗ ಸಂಚಾರಕ್ಕೆ ತೆರೆದು ಕೊಂಡಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.