ಬೆಂಗಳೂರು : ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು 4 ವರ್ಷದ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷ ಪ್ರಾಯದ ಮಗು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಸಂಭವಿಸಿದೆ.
ಮೃತ ಬಾಲಕಿಯನ್ನು ರಾಜೇಂದ್ರ-ಲಾವಣ್ಯ ದಂಪತಿಯ ಪ್ರಥಮ ಪುತ್ರಿ ನಿಶಿಕಾ (4) ಎಂದು ಗುರುತಿಸಲಾಗಿದೆ.
ಯುಗಾದಿ ಹಬ್ಬದ ಬಳಿಕ ತಾಯಿ ತನ್ನ ಮಕ್ಕಳೊಂದಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ, ತಾಯಿ ಕಂಕುಳಲ್ಲಿ ಕಿರಿಯ ಮಗುವನ್ನು ಹೊತ್ತುಕೊಂಡು, ದೊಡ್ಡ ಮಗುವಿನ ಕೈ ಹಿಡಿದು ಸಾಗುತ್ತಿದ್ದಾಗ ಎದುರು ಬರುತ್ತಿದ್ದ ಲಾರಿ ಏಕಾಏಕಿ ನಿಯಂತ್ರಣ ತಪ್ಪಿ ಬಾಲಕಿಯ ಮೇಲೆ ಹರಿದಿದೆ.
ಅಪಘಾತದ ತೀವ್ರತೆಯಿಂದ ಬಾಲಕಿ ಸ್ಥಳದಲ್ಲೇ ಹೆತ್ತ ತಾಯಿಯ ಎದುರೇ ಪ್ರಾಣ ಕಳೆದುಕೊಂಡಿದ್ದಾಳೆ. ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿದರೂ, ಬಾಲಕಿಯನ್ನು ರಕ್ಷಿಸಲಾಗಲಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂಬ ವಿಷಯದ ಮೇಲೆ ತನಿಖೆ ಮುಂದುವರೆದಿದೆ.





