Home Crime ಬೆಂಗಳೂರು : ಭೀಕರ ಅಪಘಾತ : ಮೂವರು ಸಾವು…!!

ಬೆಂಗಳೂರು : ಭೀಕರ ಅಪಘಾತ : ಮೂವರು ಸಾವು…!!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಈ ದುರ್ಘಟನೆ ಸಂಭವಿಸಿದೆ ಮ

ನಿಂತಿದ್ದ ಈಚರ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಗೂಡ್ಸ್ ಆಟೋ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ನಂತರ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಮೂಲದ ಮಾಹಿತಿ ಪ್ರಕಾರ, ಕೋಲಾರದಿಂದ ಬೆಂಗಳೂರಿನತ್ತ ಆಲೂಗಡ್ಡೆ ಸಾಗಿಸುತ್ತಿದ್ದ ಕ್ಯಾಂಟರ್ (ಈಚರ್) ವಾಹನ ಮೇಡಹಳ್ಳಿ ಮೇಲ್ಸೇತುವೆ ಬಳಿ ಟೈರ್ ಬ್ಲಾಸ್ಟ್ ಆಗಿ ರಸ್ತೆ ಬದಿಯಲ್ಲಿ ನಿಂತಿತ್ತು. ಚಾಲಕ ಟೈರ್ ಬದಲಾಯಿಸಲು ಯತ್ನಿಸುತ್ತಿದ್ದ ಸಮಯದಲ್ಲೇ ಹಿಂಬದಿಯಿಂದ ಬಂದ ಗೂಡ್ಸ್ ಆಟೋ ನೇರವಾಗಿ ವಾಹನಕ್ಕೆ ಢಿಕ್ಕಿಯಾಗಿದೆ.

ಅಪಘಾತದ ತೀವ್ರತೆ ಹೆಚ್ಚಿದ್ದರಿಂದ ಆಟೋ ಸಂಪೂರ್ಣ ಹಾನಿಗೊಂಡಿದ್ದು, ಅದರೊಳಗಿದ್ದ ಮೂವರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಮಣಿಕಂಠ, ಸುರೇಶ್ ಮತ್ತು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ಎಂಬ ಮಾಹಿತಿ ದೊರೆತಿದೆ.

ಅಪಘಾತದ ಮಾಹಿತಿ ತಿಳಿದ ಕೂಡಲೇ ಡಿಸಿಪಿ ನೇಮಗೌಡ ಹಾಗೂ ಕೆ.ಆರ್.ಪುರಂ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಅಪಘಾತದ ನಿಖರ ಕಾರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಮತ್ತೊಮ್ಮೆ ನಗರದಲ್ಲಿ ಮಧ್ಯರಾತ್ರಿ ವಾಹನ ಚಾಲನೆ ವೇಳೆ ಜಾಗರೂಕತೆಯ ಅಗತ್ಯವನ್ನು ಎತ್ತಿಹಿಡಿದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.