ಉಡುಪಿ : ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ನೇತೃತ್ವದ ನಿಯೋಗ ಜೂ.23ರಂದು ಸೋಮವಾರ ಭೇಟಿಯಾಗಿ ಪುಷ್ಪಗುಚ್ಛ ನೀಡಿ ಅಭಿನಂದಿಸಿತು.
ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ನಗರದ ಸಂಚಾರ ವ್ಯವಸ್ಥೆ ಕಾಪಾಡಲು ವಿಶೇಷ ಆದ್ಯತೆ ನೀಡುವಂತೆ ಹಾಗೂ ಉಡುಪಿ ನಗರ ಪೊಲೀಸ್ ಠಾಣೆ ಬಹಳ ಇಕ್ಕಟ್ಟಾಗಿರುವುದರಿಂದ ಆ ಠಾಣೆಯ ಮೇಲ್ಭಾಗದಲ್ಲಿರುವ ಮಹಿಳಾ ಠಾಣೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ವಿನಂತಿಸಲಾಯಿತು.
ವಕೀಲರ ಸಂಘಕ್ಕೆ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆಯೂ ಆಹ್ವಾನಿಸಲಾಯಿತು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್.ಪಿ. ಅತಿ ಶೀಘ್ರ ವಕೀಲರ ಸಂಘಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ನಿಯೋಗದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಜೊತೆ ಕಾರ್ಯದರ್ಶಿ ಬೈಲೂರು ರವೀಂದ್ರ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಮೂಡುಬೆಳ್ಳೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಕೃಷ್ಣ ಆಳ್ವ ಮತ್ತು ಆರೂರು ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.