Home Crime ಶಿರ್ವ: ರಸ್ತೆ ತಡೆ ವಿವಾದ – ಹಲ್ಲೆ, ಜೀವ ಬೆದರಿಕೆ ಆರೋಪ, ಮೂವರ ವಿರುದ್ಧ ಪ್ರಕರಣ…!!

ಶಿರ್ವ: ರಸ್ತೆ ತಡೆ ವಿವಾದ – ಹಲ್ಲೆ, ಜೀವ ಬೆದರಿಕೆ ಆರೋಪ, ಮೂವರ ವಿರುದ್ಧ ಪ್ರಕರಣ…!!

ಶಿರ್ವ: ಜಮೀನಿಗೆ ಹೋಗುವ ರಸ್ತೆಯನ್ನು ತಡೆಯಲು ಯತ್ನಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೆಲ್ ಭೂತಬೆಟ್ಟು ನಿವಾಸಿ ಗಣೇಶ್ ಶೆಟ್ಟಿ (54) ಅವರು ನೀಡಿದ ದೂರಿನಂತೆ, ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳು, ತಾಯಿ ಮತ್ತು ಅಕ್ಕನೊಂದಿಗೆ ವಾಸವಾಗಿದ್ದು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ತಾಯಿ (83) ಮತ್ತು ಅಕ್ಕ (87) ವೃದ್ಧಾಪ್ಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರನ್ನು ನಿಯಮಿತವಾಗಿ ಉಡುಪಿ ಹಾಗೂ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತದೆ.

ದೂರಿನ ಪ್ರಕಾರ, ಅವರ ನೆರೆಹೊರೆಯವರಾಗಿರುವ ಸುರೇಶ್ ಶೆಟ್ಟಿ (54), ಸುರೇಖಾ ಶೆಟ್ಟಿ (57) ಮತ್ತು ಭಾಸ್ಕರ್ ಶೆಟ್ಟಿ (62) ಅವರು ಪಿರ್ಯಾದಿದಾರರ ಜಮೀನಿಗೆ ಹೋಗುವ ರಸ್ತೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ರಸ್ತೆ ಶಿರ್ವಾ ಗ್ರಾಮದ ಸರ್ವೇ ನಂ.270ರಲ್ಲಿ ಇರುವ ಪಿರ್ಯಾದಿದಾರರ ಜಮೀನಿಗೆ ಸಂಪರ್ಕ ಹೊಂದಿದ್ದು, ಅದನ್ನು ಹೊರತುಪಡಿಸಿ ಬೇರೆ ಪ್ರವೇಶ ಮಾರ್ಗವಿಲ್ಲ ಎಂದು ತಿಳಿಸಲಾಗಿದೆ.

ಮಾರ್ಚ್ 4ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಪಿರ್ಯಾದಿದಾರರು ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿತರು ಕಾರಿನಲ್ಲಿ ಬಂದು ರಸ್ತೆಯನ್ನು ತಡೆಯಲು ಯತ್ನಿಸಿದ್ದು, ಕಾರಿನಿಂದ ಅವರನ್ನು ಹೊರಗೆಳೆದು ಕಬ್ಬಿಣದ ರಾಡ್ ಹಾಗೂ ಮರದ ಕೋಲುಗಳಿಂದ ಹಲ್ಲೆ ಮಾಡಲು ಪ್ರಯತ್ನಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಅಸಭ್ಯ ಪದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರೆಂದು ಹೇಳಲಾಗಿದೆ.

ಇನ್ನೂ ಸುಮಾರು 25 ದಿನಗಳ ಹಿಂದೆ ಆರೋಪಿತರು ಕಂಟೆಯ ತಂತಿ ಬಳಸಿ ರಸ್ತೆಯನ್ನು ತಡೆಯಲು ಯತ್ನಿಸಿದ್ದು, ಪಿರ್ಯಾದಿದಾರರು ತಡೆಯಲು ಮುಂದಾದಾಗ ಮತ್ತೆ ಜೀವ ಬೆದರಿಕೆ ಹಾಕಿ ಗಲಾಟೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ ಆರೋಪಿತರಲ್ಲಿ ಒಬ್ಬರು ತಮ್ಮನ್ನು ಮುಂಬೈಯಲ್ಲಿ ಪೊಲೀಸ್ ಅಧಿಕಾರಿಯೆಂದು ಸುಳ್ಳಾಗಿ ಹೇಳಿಕೊಳ್ಳುತ್ತಿದ್ದು, ರಿವಾಲ್ವರ್ ಇದೆ ಎಂದು ಬೆದರಿಕೆ ಹಾಕಿದರೆಂದು ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.