ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದಲ್ಲಿ ಬೆಂಕಿ ಅವಘಡದಲ್ಲಿ ಸುಟ್ಟ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಹಿಲ್ಡಾ ಅಲ್ಮೇಡಾ ಎಂದು ಗುರುತಿಸಲಾಗಿದೆ. ಕಳೆದ ಜೂನ್ 23ರಂದು ಮನೆಯ ಹೊರಗಡೆ ಒಲೆಯಲ್ಲಿ ಗಂಜಿ ಬೇಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಅವರನ್ನು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಜುಲೈ 18ರಂದು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಆದರೆ ಜುಲೈ 19ರಂದು ಮಧ್ಯಾಹ್ನ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4 ಗಂಟೆ 11 ನಿಮಿಷಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸುಟ್ಟ ಗಾಯಗಳ ಪರಿಣಾಮದಿಂದಲೋ ಅಥವಾ ಹೃದಯಾಘಾತದಿಂದಲೋ ಸಾವು ಸಂಭವಿಸಿರುವ ಸಾಧ್ಯತೆ ಇದ್ದು, ಮರಣದ ನಿಖರ ಕಾರಣ ವೈದ್ಯಕೀಯ ವರದಿ ಬಳಿಕ ತಿಳಿಯಲಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




