ಉಡುಪಿ: ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕಚ್ಚಾಟದ ಮಧ್ಯೆಯೇ ಉಡುಪಿ ಕಂಬಳದ ಶಂಕುಸ್ಥಾಪನೆ ಮಣಿಪಾಲ ಸಮೀಪದ 80 ಬಡಗುಬೆಟ್ಟುವಿನಲ್ಲಿರುವ ಕಂಬಳದ ಕರೆಯಲ್ಲಿ ಇಂದು ನೆರವೇರಿತು.
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ ಶೆಟ್ಟಿ ನೇತೃತ್ವದಲ್ಲಿ ಉಭಯ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ಹಾಗೂ ಕಂಬಳದ ಪೋಸ್ಟರ್ ಅನಾವರಣ ಸಮಾರಂಭ ನಡೆಯಿತು.
ಶಂಕುಸ್ಥಾಪನೆ ನಡೆಸಲು ಕಾಂಗ್ರೆಸ್ ಮಾಜಿ ಸಚಿವ ವಿನಯಕುಮಾರ ಸೊರಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾರ್ಚ್ 4ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ಮಾಡಬೇಕೆಂದು ಸೊರಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಹೇರಿತ್ತು. ಹಲವು ಗೊಂದಲ, ಜಿಲ್ಲಾಡಳಿತದ ಆದೇಶದ ಹೊರತಾಗಿಯೂ ಯಾವುದೇ ಸದ್ದು ಗದ್ದಲವಿಲ್ಲದೆ ಶಾಂತಿಯುತವಾಗಿ ಶಂಕುಸ್ಥಾಪನೆ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕಾರ್ಯಕ್ರಮ ಜರುಗಿತು.







