Home Crime ಮಂಗಳೂರು ಸೈಬರ್ ಅಪರಾಧ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಹೈದರಾಬಾದ್ ನಲ್ಲಿ ಕುಳಿತು ಸೈಬರ್ ವಂಚನೆ...

ಮಂಗಳೂರು ಸೈಬರ್ ಅಪರಾಧ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಹೈದರಾಬಾದ್ ನಲ್ಲಿ ಕುಳಿತು ಸೈಬರ್ ವಂಚನೆ ನಡೆಸುತ್ತಿದ್ದ ತಂಡದ ಬಂಧನ…!!

ಮಂಗಳೂರು : ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ರವರ ಸ್ನೇಹಿತ ಇಬ್ರಾಹಿಂ ಎಂಬಾತನು ದೂರುದಾರರ ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದು, ದೂರುದಾರರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪನಿಯ ಸಿಮ್ ಕಾರ್ಡನ್ನು ಇಬ್ರಾಹಿಂಗೆ ನೀಡಿದ್ದು, ಸದ್ರಿ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ಸೆನ್ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸಿದಾಗ, ಸದ್ರಿ ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡವು ಹೈದರಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿದ್ದು, ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಹೈದರಾಬಾದಿಗೆ ತೆರಳಿ ಸೈಬರ್ ವಂಚನಾ ತಂಡವನ್ನು ಪತ್ತೆ ಮಾಡಿ, 5 ಜನ ಆರೋಪಿತರನ್ನು ಹೈದರಾಬಾದಿನಲ್ಲಿ ಹಾಗೂ ಓರ್ವ ಆರೋಪಿತನನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಶೇಖ್ ಕರೀಮುಲ್ಲಾ @ ರಸೂಲ್ ನೆಲ್ಲೂರು, ಆಂಧ್ರ ಪ್ರದೇಶ. ಬುಡಿದಿನ್ನೆ ವಂಶಿ @ ಗುರು ಕರ್ನೂಲ್, ಆಂಧ್ರ ಪ್ರದೇಶ. ಪಂಡಿತಿ ಕ್ರಾಂತಿ ಹೈದರಾಬಾದ್, ತೆಲಂಗಾಣ. ಇಬ್ರಾಹಿಂ ಮುಲ್ಕಿ, ಮಂಗಳೂರು. ಬಡೆ ಶ್ರೀನಿವಾಸ್ ಹೈದರಾಬಾದ್, ತೆಲಂಗಾಣ. ಉತ್ಪಲ ಸಂತೋಷ್ ಕೃಷ್ಣ ನೆಲ್ಲೂರು, ಆಂಧ್ರ ಪ್ರದೇಶ. ಬಂಧಿತ ಆರೋಪಿಗಳು.

ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿರುತ್ತಾರೆ. ಬಂಧಿತರಿಂದ ಮೊಬೈಲ್ ಫೋನ್-18, ಲ್ಯಾಪ್ ಟಾಪ್ -1, ಸಿಮ್ ಕಾರ್ಡ್ -12, ಚೆಕ್ ಬುಕ್-15, ಬ್ಯಾಂಕ್ ಪಾಸ್ ಬುಕ್-12, ಡೆಬಿಟ್ ಕಾರ್ಡ್ -18 ಇವುಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ.

ಆರೋಪಿಗಳು ಸಾಮಾಜಿಕ ಜಾಲತಾಣದ ಮುಖಾಂತರ ಬ್ಯಾಂಕ್ ಖಾತೆದಾರರಿಗೆ ಶೇಕಡ 4 ರಿಂದ 6 ರಷ್ಟು ಕಮೀಷನ್ ನೀಡುವುದಾಗಿ ಅಕರ್ಷಕ ಜಾಹೀರಾತುಗಳನ್ನು ನೀಡಿ, ಇದರಿಂದ ದುರಾಸೆಗೊಳಗಾದ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಮತ್ತು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ, ವಂಚನೆ ನಡೆಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿರುತ್ತದೆ.

ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಸದ್ರಿ ಪ್ರಕರಣದ ಒಂದು ಬ್ಯಾಂಕ್ ಖಾತೆಯ ಮೇಲೆ NCRP Portal ನಲ್ಲಿ ದೇಶದದ್ಯಾಂತ ಸುಮಾರು 05 ದೂರುಗಳು ದಾಖಲಾಗಿರುತ್ತವೆ.

ಆರೋಪಿತರಿಂದ ಸ್ವಾಧೀನಪಡಿಸಿದ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲನೆ ನಡೆಸಿದಾಗ, ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ NCRP Portal ನಲ್ಲಿ ಒಟ್ಟು 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿರುತ್ತದೆ. ಸದ್ರಿ ಸೈಬರ್ ವಂಚನಾ ತಂಡವು ದಿನಾಂಕ: 26-02-2026 ರಂದು ಒಂದೇ ದಿನ 2 ಕೋಟಿಗೂ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿರುವುದು ತನಿಖೆ ಸಮಯ ಕಂಡುಬಂದಿದ್ದು, ಸೈಬರ್ ವಂಚಕರು ವಂಚನೆಗೆ ಬಳಕೆ ಮಾಡಿರುವ ಬ್ಯಾಂಕ್ ಖಾತೆಗಳ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.