Home Latest ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಕೆಡವಿ ತೆರಿಗೆ ಪಾವತಿ ಕೇಂದ್ರ ಸ್ಥಾಪನೆಗೆ ವಿರೋಧ

ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಕೆಡವಿ ತೆರಿಗೆ ಪಾವತಿ ಕೇಂದ್ರ ಸ್ಥಾಪನೆಗೆ ವಿರೋಧ

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಕೆಡವಿ ಒಳಾಂಗಣದಲ್ಲಿ ನಗರಸಭೆಯ ತೆರಿಗೆ ಪಾವತಿ ಕೇಂದ್ರ ಸ್ಥಾಪನೆಯ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ಜಿಲ್ಲಾಡಳಿತವು ತಕ್ಷಣ ತೆರಿಗೆ ಪಾವತಿ ಕೇಂದ್ರದ, ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು, ನಗರಾಡಳಿತ ಕಛೇರಿಯ ಆಯಾಕಟ್ಟಿನ ಸ್ಥಳದಲ್ಲಿಯೇ ತೆರಿಗೆ ಪಾವತಿ ಕೇಂದ್ರವನ್ನು ನಿರ್ಮಾಣ ಮಾಡಬೇಕು ಎಂದು, ಸಮಾಜ ಸೇವಕ ಹಾಗೂ ಮಾಜಿ ನಗರಸಭಾ ಸದಸ್ಯ ನಿತ್ಯಾನಂದ‌ ಒಳಕಾಡುವರು ಆಗ್ರಹಪಡಿಸಿದ್ದಾರೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹಾಗೂ ಚಿಕಿತ್ಸಕರಿಗೂ ಸ್ಥಳದಲ್ಲಿ ಗುಂಪಾಗಿ ಸೇರುವ ತೆರಿಗೆ ಪಾವತಿದಾರರ ವ್ಯವಹಾರ ಮಾತುಕತೆಗಳ ಗದ್ದಲದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸನಿಹದಲ್ಲಿ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಹನ ನಿಲುಗಡೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು‌ ಹೆಚ್ಚಾಗಿರುತ್ತದೆ. ಹಾಗೆಯೇ ಆರೋಗ್ಯ ಇಲಾಖೆಯ ಸ್ಥಳವನ್ನು ಬೇರೊಂದು ಕೆಲಸಕ್ಕೆ ಬಳಸಿಕೊಂಡಿರುವುದು ಅಪರಾಧವಾಗಿರುತ್ತದೆ.