ಮಂಡ್ಯ: ನಾಗಮಂಗಲದ ಮಾಜಿ ಶಾಸಕ ಮತ್ತು ಜೆಡಿಎಸ್ ಮುಖಂಡ ಸುರೇಶ್ ಗೌಡ ಅವರ ಕಾರು ಮಂಡ್ಯ ಜಿಲ್ಲೆಯ ಬಸರಾಳು ಬಳಿ ತಡರಾತ್ರಿ ಭೀಕರ ಅಪಘಾತಕ್ಕೀಡಾಗಿದೆ.
ಘಟನೆಯಲ್ಲಿ ಸುರೇಶ್ ಗೌಡ ಮತ್ತು ಅವರ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮಾಜಿ ಶಾಸಕ ಸುರೇಶ್ ಗೌಡ ಅವರು ಮದ್ದೂರಿನ ಹೊಸಗಾವಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ವಾಪಸ್ ನಾಗಮಂಗಲಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸುರೇಶ್ ಗೌಡರ ತಲೆ, ಮುಖ ಹಾಗೂ ಕೈಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ನರಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಶಂಕಿಸಿದ್ದಾರೆ.
ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ, ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಮಂಡ್ಯದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.



